ಆನ್‌ಲೈನ್ ಗೇಮ್ ಹುಚ್ಚು ಎಷ್ಟು ಅಪಾಯಕಾರಿ.? ಹೆತ್ತ ತಂದೆ, ಒಡಹುಟ್ಟಿದ ಅಕ್ಕನನ್ನ ಕೊಂದ ಯುವಕ!

Spread the love

ತಂದೆ -ತಾಯಿ ಸೇರಿದಂತೆ ಕುಟುಂಬಸ್ಥರ ಮೇಲೆಯೇ ಮಗ ಚಾಕುವಿನಿಂದ ದಾಳಿ ಮಾಡಿದ್ದರಿಂದ ಅಕ್ಕ- ತಂದೆ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ತಾಲೂಕಿನ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ೧೦ ಗಂಟೆ ಸುಮಾರಿಗೆ ಆನ್‌ಲೈನ್ ಪಬ್ ಜೀ ಗೇಮ್ ವ್ಯಸನಿಯಾಗಿದ್ದ ಪಿಯುಸಿ ವಿದ್ಯಾರ್ಥಿ ಸಾಯಿ ವೆಂಕಟಮಣಿ (18) ಚಾಕುವಿನಿಂದ ದಾಳಿ ಮಾಡಿದ್ದಾನೆ.

ತಾಯಿ ಸೌಜನ್ಯ (40), ಅಕ್ಕ ಪ್ರಗತಿ (19) ಮತ್ತು ತಂದೆ ವೆಂಕಟ ನಾಯ್ಡು ಅವರ ಮೇಲೆ ದಾಳಿ ಮಾಡಿದ ವೆಂಕಟಮಣಿ, ಬಳಿಕ ತನಗೂ ಇರಿದುಕೊಂಡಿದ್ದಾನೆ. ಇರಿತದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಅಕ್ಕ ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ತೀವ್ರ ಗಾಯಗೊಂಡಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ತೀವ್ರ ಗಾಯಗೊಂಡ ತಾಯಿಯನ್ನು ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದೆ. ಕುಟುಂಬಸ್ಥರ ಮೇಲೆ ಚಾಕು ದಾಳಿ ಮಾಡಿದ ಬಳಿಕ ತನಗೂ ಇರಿದುಕೊಂಡು ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ದಿ, ಡಿವೈಎಸ್ಪಿ, ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ.

“ಪ್ರಾಥಮಿಕ ತನಿಖೆಯಲ್ಲಿ ಶನಿವಾರ 7 ಗಂಟೆ ಸುಮಾರಿಗೆ ಈ ಕುಟುಂಬದವರು, ವೆಂಕಟ ನಾಯ್ಡು, ಅವರ ಪತ್ನಿ ಸೌಜನ್ಯ, ಮಗಳು ಪ್ರಗತಿ, ಮಗ ಸಾಯಿ ಹಾಗೂ ವೆಂಕಟ ನಾಯ್ಡು ಅವರ ಅಪ್ಪ-ಅಮ್ಮ ಹಣ್ಣುಹಂಪಲು ತಿಂದು, ಬಳಿಕ ರಾತ್ರಿ 9 ಗಂಟೆಗೆ ಊಟ ಮಾಡಿ ಮಲಗಿದ್ದರು.

ಸುಮಾರು 10 ಗಂಟೆಗೆ ಮನೆಯಲ್ಲಿ ಜೋರಾದ ಶಬ್ಧ ಕೇಳಿಬಂದಿದ್ದು, ವೆಂಕಟ ನಾಯ್ಡು ಅವರ ತಂದೆ ಪಕ್ಕದ ಮನೆಯವರ ಸಹಾಯದೊಂದಿಗೆ ರೂಮ್ ಬಾಗಿಲು ತೆರೆದಾಗ 4 ಜನರೂ ಗಾಯಗೊಂಡಿದ್ದರು. ವೆಂಕಟ ನಾಯ್ಡು, ಪತ್ನಿ ಸೌಜನ್ಯ, ಮಗಳು ಪ್ರಗತಿಗೆ ಗಂಭೀರ ಗಾಯಗಳಾಗಿದ್ದರೆ, ಮಗನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ತಕ್ಷಣ ಗಂಗಾವತಿ ಆಸ್ಪತ್ರೆಗೆ ಕರೆದೊಯ್ದಾಗ ಪ್ರಗತಿ ಸಾವನ್ನಪ್ಪಿದ್ದರು. ಅಲ್ಲಿಂದ ಉಳಿದವರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿದ್ದು, ಭಾನುವಾರ ಬೆಳಗ್ಗೆ ವೆಂಕಟ ನಾಯ್ಡು ಕೊನೆಯುಸಿರೆಳಿದಿದ್ದಾರೆ” ಎಂದು ಎಸ್ಪಿ ರಾಮ್ ಎಲ್.ಅರಸಿದ್ದಿ ಮಾಹಿತಿ ನೀಡಿದ್ದಾರೆ.

“ಗಾಯಾಳುಗಳನ್ನು ವಿಚಾರಿಸಿದಾಗ ನಾಲ್ವರೂ ಮಲಗಿದ್ದ ಸಂದರ್ಭದಲ್ಲಿ ಏಕಾಏಕಿ ಲೈಟ್ ಆಫ್ ಮಾಡಿ ಕುಟುಂಬದ ಸದಸ್ಯರಲ್ಲೇ ಒಬ್ಬರು ಚಾಕುವಿನಿಂದ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ವೆಂಕಟ ನಾಯ್ಡು ಅವರ ತಂದೆ ದೂರು ನೀಡಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಮೊಮ್ಮಗನ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರಸಿದ್ದಿ ತಿಳಿಸಿದ್ದಾರೆ.

WhatsApp Group Join Now

Spread the love

Leave a Reply