ಬೆಳಗಾವಿ : ಇದನ್ನ ಪ್ರೀತಿ ಅನ್ಬೇಕೋ. ಹುಚ್ಚುತನ ಅನ್ಬೇಕೋ ಅಥವಾ ನೊಂದ ಜೀವದ ಯಾತನೆ ಅನ್ಬೇಕೋ ಒಂದೂ ಗೊತ್ತಾಗ್ತಿಲ್ಲ. ಆಕೆಗೆ ಮದುವೆಯಾಗಿತ್ತು, ಹೊಸದೊಂದು ಸಂಸಾರ ಶುರುವಾಗಿತ್ತು. ಆದ್ರೆ, ಮನಸ್ಸು ತುಂಬಾ ಪ್ರೀತಿಸಿದ ಹುಡುಗನೇ ತುಂಬಿಕೊಂಡಿದ್ದಳು. ಹೀಗಾಗಿ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಊರು ತೊರೆದಿದ್ಲು.
ದೂರದಲ್ಲೆಲ್ಲೋ ನೆಮ್ಮದಿಯ ಸಂಸಾರ ಕಟ್ಟಿಕೊಳ್ಳೋಣ ಅಂತಾ ಆಸೆ ಪಟ್ಟಿದ್ರು. ಆದ್ರೆ, ಹೆಣ್ಣೆತ್ತವರು ಬಿಡಬೇಕಲ್ಲ. ಮಗಳನ್ನ ಹುಡುಕಿಕೊಂಡು ಬಂದವರು, ದೂರ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಮರ್ಯಾದಾ ಹತ್ಯೆ ಮಾಡಿದ್ರು. ಯಾವಾಗ ಪ್ರೇಯಸಿಯ ದುರಂತ ಅಂತ್ಯವಾಯ್ತೋ, ಇದೇ ನೋವಲ್ಲಿದ್ದ ಪ್ರಿಯಕರ ಆಕೆಯ ಜನ್ಮದಿನದಂದೇ ಉಸಿರು ನಿಲ್ಲಿಸಿದ್ದಾನೆ. ನೀನಿಲ್ಲದ ಬದುಕು ನನಗೂ ಬೇಡ ಅಂತಾ ನೇಣಿಗೆ ಕೊರಳೊಡ್ಡಿದ್ದಾನೆ.
ಇವರಿಬ್ಬರ ಮದುವೆಗೆ ಹೆಣ್ಣೆತ್ತವರು ಒಪ್ಪಿರಲಿಲ್ಲ
ಈಗೀಗೆಲ್ಲಾ ಪ್ರೀತಿ ಪ್ರೇಮ ಅಂದ್ರೆ ಟೈಮ್ ಪಾಸ್ ಅನ್ನೋರೇ ಜಾಸ್ತಿ. ಯಾರ ಮೇಲೆ ಯಾವಾಗ ಲವ್ ಆಗುತ್ತೋ, ಯಾರನ್ನ ಯಾವಾಗ ಬಿಟ್ಟೋಗ್ತಾರೋ ಒಂದೂ ಗೊತ್ತಾಗಲ್ಲ. ಪ್ರೀತಿ ಹೆಸರಲ್ಲಿ ಆಸೆ ತೀರಿಸಿಕೊಳ್ಳೋರೇ ಜಾಸ್ತಿ. ಆದ್ರೆ, ಇವರಿಬ್ಬರದ್ದು ಹಾಗಲ್ಲ. ಬದುಕಿದ್ರೂ ಜೊತೆಯಲ್ಲೇ, ಸತ್ತರೂ ಜೊತೆಯಲ್ಲೇ ಅಂತಾ ಉಸಿರು ನಿಲ್ಲಿಸಿದ್ದಾರೆ. ಮೃತ ಪ್ರಿಯತಮೆಯ ಹೆಸರು ಸತ್ಯವ್ವ, ಪ್ರಿಯಕರನ ಹೆಸರು ಕೃಷ್ಣ ಪಾಟೀಲ್, ಇಬ್ಬರೂ ಕೂಡಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಕೇತರ ಗ್ರಾಮದವರು. ಒಂದೇ ಊರಿನವರಾಗಿದ್ದರಿಂದ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಿದ್ದರು. ಆದ್ರೆ, ಇವರಿಬ್ಬರ ಮದುವೆಗೆ ಹೆಣ್ಣೆತ್ತವರು ಒಪ್ಪಿರಲಿಲ್ಲ. ಹೀಗಾಗಿಯೇ ನಾಲ್ಕು ವರ್ಷದ ಹಿಂದೆ ಬಲವಂತವಾಗಿ ಸತ್ಯವ್ವಳ ಮದುವೆ ಮಾಡಿದ್ರು.
ಮಗಳಿಗೆ ಮದುವೆ ಮಾಡಿದ್ರೂ ಆಕೆಯ ಮನಸಲ್ಲಿದ್ದ ಪ್ರೀತಿ ಗೋಪುರ ಮಾತ್ರ ಹಾಗೆಯೇ ಇತ್ತು. ಹೀಗಾಗಿಯೇ ಗಂಡ ಹೆಂಡ್ತಿ ಸಂಬಂಧ ಅನ್ನೋದು ಹೆಸರಿಗಷ್ಟೇ ಎನ್ನುವಂತಾಗಿತ್ತು. ಕೃಷ್ಣನ ಸಂಪರ್ಕ ಬಿಡದ ಸತ್ಯವ್ವ, ಈತನ ಜೊತೆಗೇ ಬದುಕೋ ನಿರ್ಧಾರ ಮಾಡಿದ್ಲು. ಏಪ್ರಿಲ್ 5ನೇ ತಾರೀಖು ಇಬ್ಬರೂ ಮನೆ ಬಿಟ್ಟು ಹೋಗಿದ್ರು. ಯಾವಾಗ ಈ ವಿಷಯ ಹೆಣ್ಣೆತ್ತವರಿಗೆ ಗೊತ್ತಾಯ್ತೋ ರಾಕ್ಷಸರಾಗಿದ್ದಾರೆ.
ಇವಳಿಂದ ನಮ್ಮ ಮರ್ಯಾದೆ ಹೋಯ್ತು ಅಂತಾ ಹುಡುಕಾಟ ಶುರು ಮಾಡಿದ್ದಾರೆ. ಬಾಡಿಗೆ ಮನೆ ಮಾಡಿಕೊಂಡು ಸಂಸಾರ ಶುರು ಮಾಡಿದವರನ್ನ ಪತ್ತೆ ಹಚ್ಚಿದ್ದಾರೆ. ರಾಜೀ ಪಂಚಾಯ್ತಿ ಮಾಡ್ತೀವಿ ಅಂತಾ ಕಥೆ ಕಟ್ಟಿದ್ರು. ಇವರ ಮಾತು ನಂಬಿಕೊಂಡು ಬರ್ತಿದ್ದಂತೆ ಆಗಿದ್ದೇ ಬೇರೆ. ಮಹಾರಾಷ್ಟ್ರದಲ್ಲಿರೋ ಸತ್ಯವ್ವಳ ಸಹೋದರಿ ಮನೆಗೆ ಕರೆದುಕೊಂಡು ಹೋದವರು, ಹೊಡೆದು ಬಡಿದು ಚಿತ್ರಹಿಂಸೆ ಕೊಟ್ಟಿದ್ರು.
ಗಂಡನ ಜೊತೆಗೇ ಸಂಸಾರ ಮಾಡುವಂತೆ ಬಲವಂತ ಮಾಡಿದ್ರು. ಆದ್ರೆ, ಸತ್ಯವ್ವ ಒಪ್ಪೋದಕ್ಕೆ ರೆಡಿ ಇರಲಿಲ್ಲ. ಇದ್ರಿಂದ ಸಿಟ್ಟಿಗೆದ್ದ ಕುಟುಂಬಸ್ಥರು ಅಲ್ಲೇ ಕೊಂದು ಹಾಕಿದ್ರು. ಈ ವಿಷಯ ಪ್ರಿಯಕರ ಕೃಷ್ಣನ ಕಿವಿಗೆ ಬೀಳ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಹೀಗಾಗಿ ತನಿಖೆ ಶುರು ಮಾಡಿದ ಪೊಲೀಸ್ರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ರು. ಇದೆಲ್ಲ ಆಗಿ ಎರಡು ತಿಂಗಳಾಗ್ತಿದ್ದಂತೆ ಭಗ್ನಪ್ರೇಮಿಯ ಕಥೆಯೂ ದುರಂತ ಅಂತ್ಯ ಕಂಡಿದೆ.
ಸತ್ಯವ್ವ ಸಾವನ್ನಪ್ಪಿ ಭರ್ತಿ ಎರಡು ತಿಂಗಳಾಗಿತ್ತು. ಜೂನ್ 4ರಂದು ಈಕೆಯ ಬರ್ತ್‌ಡೇ ಕೂಡಾ ಇತ್ತು. ನಿತ್ಯವೂ ತನ್ನವಳ ನೋವಲ್ಲೇ ದಿನ ಕಳೀತಿದ್ದವ, ನೀನೇ ಇಲ್ಲದ ಮೇಲೆ ಈ ಬದುಕ್ಯಾಕೆ ಅಂತಾ ತಾನೂ ನೇಣಿಗೆ ಶರಣಾಗಿದ್ದಾನೆ. ಒಟ್ನಲ್ಲಿ ಜೀವಕ್ಕೆ ಜೀವ ಅಂತಾ ಪ್ರೀತಿಸ್ತಿದ್ದವರು ಇಂತಾ ಸಾವು ಕಂಡಿದ್ದು ಮಾತ್ರ ನಿಜಕ್ಕೂ ಘನಘೋರ.
ಪ್ರೀತಿಸಿ ಮದುವೆಯಾಗಿದ್ದವಳ ಮಾರ್ಯಾದಾ ಹತ್ಯೆ! ಲವರ್ ಹುಟ್ಟುಹಬ್ಬದಂದೇ ನೇಣಿಗೇರಿದ ಭಗ್ನ ಪ್ರೇಮಿ!
WhatsApp Group
Join Now