ರಾಮಲಿಂಗಾರೆಡ್ಡಿ ಮೊಬೈಲ್ ಸ್ವಿಚ್ ಆಫ್.. ರಾಜೀನಾಮೆ ಕೊಟ್ಟು ರಾಜ್ಯದ ಗಡಿ ದಾಟಿದ ‘ಕೈ’ ನಾಯಕ.?

Spread the love

ಖಾತೆ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದಾರೆ.

ಕೊಟ್ಟ ಮಾತು ತಪ್ಪಿದ್ದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಿಂದಲೇ ಹೊರಬಂದಿರುವ ರೆಡ್ಡಿ ಅವರ ಈ ನಡೆ, ಕಾಂಗ್ರೆಸ್ (Congress) ಸರ್ಕಾರಕ್ಕೆ ದೊಡ್ಡ ಆಘಾತ ತಂದಿಟ್ಟಿದೆ. ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ರಾಮಲಿಂಗಾರೆಡ್ಡಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ, ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜೀನಾಮೆ ಪ್ರಕಟಿಸಿದ ತಕ್ಷಣವೇ ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿರುವ ಅವರು, ಸದ್ಯ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ತಮಿಳುನಾಡಿನತ್ತ ರಾಮಲಿಂಗಾರೆಡ್ಡಿ ಪ್ರಯಾಣ.?

ಸುದ್ದಿಗೋಷ್ಠಿಯ ಬಳಿಕ ಬೆಂಗಳೂರಿನಿಂದ ಹೊರಟ ರಾಮಲಿಂಗಾರೆಡ್ಡಿ ಅವರು, ಅತ್ತಿಬೆಲೆ ಬಳಿಯ ಖಾಸಗಿ ಹೋಟೆಲ್‌ ಒಂದರಲ್ಲಿ ತಮ್ಮ ಆಪ್ತರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿಯೇ ಪಟ್ಟು ಹಿಡಿದಿರುವ ರೆಡ್ಡಿ, ಪಕ್ಷದ ನಾಯಕರು ತಮ್ಮ ಮನವೊಲಿಕೆಗೆ ಬರಬಹುದು ಎಂಬ ಕಾರಣಕ್ಕೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೋಟೆಲ್ ಸಭೆಯ ನಂತರ ಅವರು ತಮ್ಮ ಖಾಸಗಿ ಕಾರಿನಲ್ಲಿ ಕರ್ನಾಟಕದ ಗಡಿ ದಾಟಿ ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗುತ್ತಿದೆ. ನಾಯಕರ ಸಂಪರ್ಕದಿಂದ ದೂರವಿರಲು ಅವರು ಆಪ್ತರೊಂದಿಗೆ ತಮಿಳುನಾಡಿನ ರೆಸಾರ್ಟ್‌ಗೆ ತೆರಳಿದ್ದಾರಂತೆ.

ರಾಮಲಿಂಗಾರೆಡ್ಡಿ ಅವರ ಈ ಹಠಾತ್ ರಾಜೀನಾಮೆ ನಿರ್ಧಾರದಿಂದ ವಿರೋಧ ಪಕ್ಷಗಳಿಗೆ ಮತ್ತೊಂದು ಅಸ್ತ್ರ ಈಗಾಗಲೇ ಸಿಕ್ಕಂತಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಬೆಳವಣಿಗೆಯನ್ನು ತಕ್ಷಣವೇ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ರಾಹುಲ್ ಗಾಂಧಿ, ತಕ್ಷಣವೇ ರಾಮಲಿಂಗಾರೆಡ್ಡಿ ಅವರ ಮನವೊಲಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮಾಡುವ ಜವಾಬ್ದಾರಿಯನ್ನು ಸುರ್ಜೇವಾಲಾ ಅವರಿಗೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

WhatsApp Group Join Now

Spread the love

Leave a Reply