ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಕಂದಮ್ಮನೊಂದು ಆಕಸ್ಮಿಕವಾಗಿ ಕಾರಿನ (Car) ಡಿಕ್ಕಿಯೊಳಗೆ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿರುವ (Baby died) ಅತ್ಯಂತ ಕರುಣಾಜನಕ (Tragedy) ಘಟನೆ ಯಾದಗಿರಿ (Yadagiri) ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೊಟ್ಟೂರೇಶ್ವರ ಪೂಜ್ಯರ ಎಂಬುವವರ ಪುತ್ರ ಬಸವಪ್ರಭು (3) ಮೃತಪಟ್ಟ ದುರ್ದೈವಿ ಬಾಲಕ. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ತಾನಾಗಿಯೇ ಲಾಕ್ ಆದ ಡಿಕ್ಕಿ ಬಾಗಿಲು
ಬಸವಪ್ರಭು ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಮನೆಯ ಮುಂಭಾಗದ ಆವರಣದಲ್ಲಿ ಆಟವಾಡುತ್ತಿದ್ದ. ಈ ವೇಳೆ ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿ (ಬೂಟ್ ಸ್ಪೇಸ್) ತೆರೆದಿರುವುದನ್ನು ಗಮನಿಸಿದ ಮಗು, ಆಟದ ರಭಸದಲ್ಲಿ ಅದರೊಳಗೆ ಸೇರಿಕೊಂಡಿದೆ. ಆದರೆ, ದುರದೃಷ್ಟವಶಾತ್ ಡಿಕ್ಕಿಯ ಬಾಗಿಲು ತಾನಾಗಿಯೇ ಲಾಕ್ ಆಗಿದೆ.
ಹೊರಬರಲಾರದೆ ತಲೆ ಸಿಲುಕಿ ಸಾವು
ಚಿಕ್ಕ ಮಗುವಾಗಿದ್ದರಿಂದ ಬಸವಪ್ರಭುಗೆ ಒಳಗಿನಿಂದ ಡಿಕ್ಕಿಯ ಬಾಗಿಲನ್ನು ತೆರೆಯಲು ಸಾಧ್ಯವಾಗಿಲ್ಲ. ಗಾಬರಿಗೊಂಡ ಮಗು ಕಾರಿನ ಸೀಟಿನ ಕೆಳಗಿನಿಂದ ಮುಂಭಾಗಕ್ಕೆ ಬರಲು ಪ್ರಯತ್ನಿಸಿದೆ. ಈ ವೇಳೆ ಸೀಟಿನ ಸಂದಿಯಲ್ಲಿ ತಲೆ ಸಿಲುಕಿಕೊಂಡಿದ್ದು, ಹೊರಬರಲಾಗದೆ ತೀವ್ರವಾಗಿ ಒದ್ದಾಡಿ ಉಸಿರುಗಟ್ಟಿ ಡಿಕ್ಕಿಯೊಳಗೇ ಪ್ರಾಣ ಬಿಟ್ಟಿದೆ.
ಹುಡುಕಾಡಿದ ಪೋಷಕರಿಗೆ ಕಾಯುತ್ತಿತ್ತು ಶಾಕ್
ಮಧ್ಯಾಹ್ನದ ವೇಳೆಗೆ ಮಗು ಆಟವಾಡುತ್ತಿರುವುದು ಕಾಣಿಸದಿದ್ದಾಗ ಗಾಬರಿಗೊಂಡ ಪೋಷಕರು ಮತ್ತು ನೆರೆಹೊರೆಯವರು ಗ್ರಾಮದಾದ್ಯಂತ ಹುಡುಕಾಟ ನಡೆಸಿದ್ದಾರೆ. ಹಲವು ಗಂಟೆಗಳ ಕಾಲ ಹುಡುಕಿದರೂ ಮಗು ಪತ್ತೆಯಾಗದಿದ್ದಾಗ, ಅನುಮಾನಗೊಂಡು ಮನೆಯಲ್ಲೇ ನಿಂತಿದ್ದ ಕಾರಿನ ಡಿಕ್ಕಿ ತೆರೆದು ನೋಡಿದ್ದಾರೆ. ಈ ವೇಳೆ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಿತ್ತು.
“ನಮ್ಮ ಭವಿಷ್ಯದ ಕನಸೆಲ್ಲ ಕಮರಿ ಹೋಯಿತು” ಎಂದು ಮಗುವಿನ ಶವ ನೋಡಿ ಪೋಷಕರು ಹಾಗೂ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟುವಂತಿತ್ತು.