ಪಿಂಚಣಿ ಕೊಡುವ ಯೋಗ್ಯತೆ ಇಲ್ಲ, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? : ಪ್ರತಿಪಕ್ಷ ನಾಯಕ ಆರ್‌.ಅಶೋಕ್‌

Spread the love

ಹಿರಿಯ ನಾಗರಿಕರಿಗೆ ಪಿಂಚಣಿ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್‌‍ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌‍ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷವನ್ನು ಇದೇ ತಿಂಗಳ 20ಕ್ಕೆ ಪೂರೈಸುತ್ತದೆ. ತುಮಕೂರಿನಲ್ಲಿ ಸಾಧನಾ ಸಮಾವೇಶವನ್ನು ನಡೆಸುತ್ತಿದ್ದಾರೆ. ಪಿಂಚಣಿ ಕೊಡಲು ಸಾಧ್ಯವಾಗದ ಈ ಸರ್ಕಾರ ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸಬೇಕು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಕೊಡಲು ಆಗದಿರುವುದಕ್ಕೆ ಬದುಕಿರುವವರನ್ನೇ ಸಾಯಿಸುವ ಪರಿಸ್ಥಿತಿ ತಂದೊಡ್ಡಿದ್ದಾರೆ. ಸತ್ತವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಅಳಿಸಿ ಹಾಕಿದ್ದೇವೆ. ಅದಕ್ಕೆ ಕೊಡಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಪಿಂಚಣಿ ಕೊಡಲು ಯೋಗ್ಯತೆ ಇಲ್ಲವೇ ಎಂದು ಹರಿಹಾಯ್ದರು.

ನೀವು ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡುತ್ತಿದ್ದೀರಿ?, ಗೃಹಸಚಿವ ಪರಮೇಶ್ವರ್‌ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಸಚಿವರನ್ನು ಕರೆಯುತ್ತಿದ್ದಾರೆ. ನಿಮಗೆ ಪಿಂಚಣಿ ಕೊಡಲು ಆಗುತ್ತಿಲ್ಲ. ನಾವು ನುಡಿದಂತೆ ಸರ್ಕಾರ ಅಂತೀರಲ್ಲ ಎಂದು ವ್ಯಂಗ್ಯವಾಡಿದರು.

ಸುಮಾರು 81 ಲಕ್ಷ ಫಲಾನುಭವಿಗಳಿಗೆ ಪಿಂಚಣಿಯನ್ನೇ ಕೊಟ್ಟಿಲ್ಲ. ಒಂದು ಕೋಟಿ ಜನರಿಗೆ ಪಿಂಚಣಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ. ಸಾಧನ ಸಮಾವೇಶ ಮಾಡುವ ಮುಂಚೆ ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ ಕೊಡಿ. ಸಾರಿಗೆ ನೌಕರರ ಬೇಡಿಕೆಗಳನ್ನು ಬಗೆಹರಿಸಿ. ಜನ ದಾರಿಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡುವ ಸಂದರ್ಭ ಬಂದಿದೆ ಎಂದು ಎಚ್ಚರಿಕೆ ಕೊಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ ಪ್ರಣಾಳಿಕೆ ಪ್ರಕಾರ ಕೊಟ್ಟಿದ್ದೀರಾ?, ಅಂಗನವಾಡಿ ಕಾರ್ಯಕರ್ತೆಯರು ಬೀದಿಗಳಿದು ಹೋರಾಟ ಮಾಡುತ್ತ್ತಿದ್ದಾರೆ. ಸಾರಿಗೆ ನೌಕರರಿಗೆ ಕೊಟ್ಟ ಮಾತನ್ನು ತಪ್ಪಿದ್ದೀರಿ. ಸಾರಿಗೆ ನೌಕರರು ಕೂಡ ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ಜೊತೆಗೆ ಒಂದು ಕೋಟಿ ಜನರಿಗೆ ಮೋಸ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಲೂಟಿ ಕಮಿಷನ್‌ಗೆ ಕಡಿವಾಣವೇ ಇಲ್ಲದಂತಾಗಿದೆ. ಹಾಗಾಗಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವಾಗ ಬರಪುರ ಭರವಸೆ ನೀಡಿದ್ದರು. 15 ದಿನಕೊಮೆ ಜನ ಸ್ಪಂದನೆ ಮಾಡಬೇಕು ಎಂದು ಸಚಿವರಿಗೆ ಹೇಳಿದ್ದರು. ಆದರೆ ಸಚಿವರು 15 ದಿನಕೊಮೆ ಕಮಿಷನ್‌ ಕಲೆಕ್ಷನ್‌ ಮಾಡುತ್ತಿದ್ದಾರೆ ಎಂದು ಕುಹಕವಾಡಿದರು.

ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಚುನಾವಣಾ ಆಯೋಗ ವಿಶೇಷ ಮತದಾರ ಪರಿಷ್ಕರಣೆ ನಡೆಸಲು ಮುಂದಾಗಿರುವುದಕ್ಕೆ ಕಾಂಗ್ರೆಸ್‌‍ನವರು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮುಸ್ಲಿಂ ಸಂಘಟನೆಗಳು ಎಸ್‌‍ಐಆರ್‌ ವಿರೋಧಿಸುತ್ತಿರುವುದಕ್ಕೆ ಕಾರಣವಿರಬಹುದು.

ಏಕೆಂದರೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ 2 ಕೋಟಿ ಜನರು ಬಂದಿದ್ದಾರೆ. ಪ.ಬಂಗಾಳ, ಬಿಹಾರ, ಕರ್ನಾಟಕದಲ್ಲೂ ಇವರು ಇದ್ದಾರೆ. ಯಾರಾದರೂ ನನಗೆ ಸವಾಲು ಹಾಕಿದರೆ ನಾನು ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಹೇಳಿದರು.

ಸಚಿವ ಜಮೀರ್‌ ಕೇಳಿದರೆ ಯಾರೂ ಅಕ್ರಮವಾಗಿ ಕರ್ನಾಟಕಕ್ಕೆ ಬಂದಿಲ್ಲ ಎಂದು ಹೇಳುತ್ತಾರೆ. ಇವರು ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಕಡೆ ಇದ್ದಾರೆ. ಈಗ ಎಸ್‌‍ಐಆರ್‌ ನಡೆದರೆ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಹೀಗಾಗಿಯೇ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರಬಹುದು ಎಂದರು.

ಬೆಂಗಳೂರು,ಮೇ 16- ಹಿರಿಯ ನಾಗರಿಕರಿಗೆ ಪಿಂಚಣಿ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್‌‍ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

WhatsApp Group Join Now

Spread the love

Leave a Reply