ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವ ಎರಡು ರಾಜ್ಯಗಳ ಮತದಾರರನ್ನು ದೇಶದ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತರಾಗಿ ನಡೆಸಿದ್ದಾರೆ. ಕೇರಳ ರಾಜ್ಯದೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅವರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಕೇರಳ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯು ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಕರ್ನಾಟಕದ ಜೊತೆಯಲ್ಲಿ ಕೇರಳ ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಇಡೀ ದೇಶಕ್ಕೆ ರೋಲ್ ಮಾಡೆಲ್ ಆಗಿರುವ ಆಡಳಿತವನ್ನು ನೀಡಲಿದೆ ಎಂಬ ನಂಬಿಕೆ ನಮಗಿದೆ. ನೆರೆಯ ರಾಜ್ಯವಾದ ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕದ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಮೋಸದಾಟವೂ ಸೇರಿದಂತೆ ಕೇಂದ್ರ ಚುನಾವಣಾ ಆಯೋಗದ ಕೈವಾಡದಿಂದಾಗಿ ಮಮತಾ ಬ್ಯಾನರ್ಜಿಯವರು ಸೋತಿದ್ದಾರೆ. ಎಸ್ಐಆರ್ ನಿಂದ ಮಮತಾ ಬ್ಯಾನರ್ಜಿಯವರ ಪರವಾಗಿದ್ದ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಭಾರತೀಯ ಜನತಾ ಪಕ್ಷ ಸರ್ಕಾರಿ ಯಂತ್ರದ ದುರ್ಬಳಕೆ, ತೋಳ್ಬಲ ಮತ್ತು ಹಣದ ಬಲವನ್ನು ರಾಜಾರೋಷವಾಗಿ ಬಳಸಿ ಈ ಗೆಲುವನ್ನು ಸಾಧಿಸಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಗೆಲುವು ನಿಜವಾದ ಅರ್ಥದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲಾಗಿದೆ. ಧಾರ್ಮಿಕವಾಗಿ ಮತಗಳ ಧ್ರುವೀಕರಣದ ಕುತಂತ್ರ ರಾಜಕಾರಣವನ್ನು ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಪ್ರಯೋಗಿಸಿ ಯಶಸ್ಸನ್ನು ಕಂಡಿದೆ. ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರಿಗೆ ಶೀಘ್ರದಲ್ಲಿ ತಾವು ಮಾಡಿರುವ ತಪ್ಪಿನ ಅರಿವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆಡಳಿತ ವಿರೋಧಿ ಅಲೆ ಇದ್ದರೂ ಡಿಎಂಕೆ ಸರ್ಕಾರದ ಜನಪರ ಆಡಳಿತ ಮತ್ತು ಕಾರ್ಯಕ್ರಮಗಳನ್ನು ಅಲ್ಲಿನ ಜನ ಮೆಚ್ಚಿಕೊಂಡಿದ್ದರು. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಎಂದೂ ಸಹಿಸದ ತಮಿಳು ಮತದಾರರು ಇಂದಿನ ವರೆಗೆ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾ ಬಂದವರು. ಹೀಗಿದ್ದೂ ತಮಿಳುನಾಡಿನ ಯುವಜನರು ಮತ್ತು ಮಹಿಳೆಯರಲ್ಲಿ ಸಿನೆಮಾ ನಟ ವಿಜಯ್ ಅವರ ಬಗೆಗಿನ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ.
ಡಿಎಂಕೆ ಪಕ್ಷದ ಸೋಲು ದ್ರಾವಿಡ ಚಳುವಳಿಯ ಉಪ ಉತ್ಪನ್ನವಾದ ತಮಿಳುನಾಡಿನ ದ್ರಾವಿಡ ರಾಜಕೀಯಕ್ಕೆ ಆಗಿರುವ ಗಂಭೀರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಸೋಲಿನಿಂದ ಶೀಘ್ರದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಹಾರೈಸುತ್ತೇನೆ. ಇದೇ ವೇಳೆ ಅನಿರೀಕ್ಷಿತವಾಗಿ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ನಿರಾಕರಣೆ : ಸಿಎಂ ಸಿದ್ಧರಾಮಯ್ಯ
WhatsApp Group
Join Now