ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮದರಾ (ಕೆ) ಗ್ರಾಮದಲ್ಲಿ ಘೋರ ದುರಂತ ನಡೆದಿದೆ. ಕುಟುಂಬದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ವಿಕೋಪಕ್ಕೆ ತಿರುಗಿ ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷ್ಮೀಪುತ್ರ ಎಂಬ ವ್ಯಕ್ತಿ ತನ್ನ ಪತ್ನಿ ಅಂಜಲಿಯನ್ನು ಹರಿತವಾದ ಆಯುಧದಿಂದ ಕೊಂದು ನಂತರ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹೌದು, ಪತ್ನಿಯನ್ನು ಕೊಂದು ಭೀಕರ ಕೃತ್ಯ ಎಸಗಿದ ಬಳಿಕ ಆತ ತನ್ನ ಮಗುವನ್ನು ಎತ್ತಿಕೊಂಡು ಹತ್ತಿರದ ಬಾವಿಗೆ ಜಿಗಿದಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಕೂಡಲೇ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ಲಕ್ಷ್ಮೀಪುತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈ ಸಂಬಂಧ ರೇವೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಘೋರ ಹತ್ಯೆ ಮತ್ತು ಆತ್ಮಹತ್ಯೆಗೆ ಕಾರಣವಾದ ಕೌಟುಂಬಿಕ ಕಲಹದ ನಿಖರ ಹಿನ್ನೆಲೆಯನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪತ್ನಿಯನ್ನೇ ಕೊಂದು ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನ, ಅದೃಷ್ಟವಶಾತ್ ಬದುಕುಳಿದ ಕಂದಮ್ಮ
WhatsApp Group
Join Now