ಹಬ್ಬ ಸಂಭ್ರಮದ ನಡುವೆ ಆಸಿಡ್ ಎರಚಿದ ಸುಹಿಲ್ ಭಾಷಾ ; ಮಗು ಸೇರಿ ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ.!

Spread the love

ಕೋಟೆ ನಾಡು ಚಿತ್ರದುರ್ಗದಲ್ಲಿ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾಜಿ ಪತಿಯೊಬ್ಬ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿ, ತನ್ನ ಹೆಂಡತಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಅಮಾನುಷ ಕೃತ್ಯ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.

ಪ್ರೀತಿ ವಿವಾಹವೇ ಮುಳುವಾಯಿತೇ? :

ಆರೋಪಿ ಸುಹಿಲ್ ಭಾಷಾ ಮತ್ತು ತಾಸಿನಾ ಬಾನು ಎಂಬುವವರು ಈ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗಳಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಆಟೋ ಚಾಲಕನಾಗಿದ್ದ ಸುಹಿಲ್ ಭಾಷಾ ತನ್ನ ಪತ್ನಿಗೆ ವಿಪರೀತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪತಿಯ ಕಾಟ ತಾಳಲಾರದೆ ತಾಸಿನಾ ಬಾನು ಕೆಲವು ತಿಂಗಳ ಹಿಂದೆ ಆತನಿಂದ ದೂರವಾಗಿ ಬೆಂಗಳೂರಿಗೆ ತೆರಳಿ ಅಲ್ಲಿ ವಾಸವಾಗಿದ್ದರು.

ಹಬ್ಬದ ಸಂಭ್ರಮದ ನಡುವೆ ರಕ್ತಪಾತ:

ಬೆಂಗಳೂರಿನಲ್ಲಿದ್ದ ತಾಸಿನಾ ಬಾನು ಅವರು ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿರುವ ತಮ್ಮ ಹಿರಿಯ ಸಹೋದರಿ ನಗ್ಮಾ ನಾಯಕ (ಅಂತರ್ ಧರ್ಮೀಯ ಮದುವೆ) ಅವರ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ಮಾಜಿ ಪತಿ ಸುಹಿಲ್ ಭಾಷಾ, ಪೂರ್ವಯೋಜಿತವಾಗಿ ಮಚ್ಚು ಮತ್ತು ಆಸಿಡ್ ಹಿಡಿದುಕೊಂಡು ನಗ್ಮಾ ನಾಯಕ ಅವರ ಮನೆಗೆ ನುಗ್ಗಿದ್ದಾನೆ. ಮನೆಯೊಳಗೆ ನುಗ್ಗಿದ ತಕ್ಷಣ ಸುಹಿಲ್, ತಾಸಿನಾ ಬಾನು ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ಮನೆಯವರ ಮೇಲೆ ಆಸಿಡ್ ಎರಚಿದ್ದಾನೆ.

ಈ ದಾಳಿಯಲ್ಲಿ ತಾಸಿನಾ ಬಾನು, ಅವರ ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾಳ ಪುತ್ರಿ ಇಕ್ರಾ ಹಾಗೂ ಹಿರಿಯ ಸಹೋದರಿ ನಗ್ಮಾ ನಾಯಕ ಸೇರಿ ಐವರಿಗೂ ತೀವ್ರ ಗಾಯಗಳಾಗಿವೆ. ಐವರ ಮೇಲೂ ಆಸಿಡ್ ಬಿದ್ದಿದ್ದು, ದೇಹದ ಹಲವು ಭಾಗಗಳು ಸುಟ್ಟುಹೋಗಿವೆ. ದಾಳಿಯ ನಂತರ ಆರೋಪಿ ಸುಹಿಲ್ ಭಾಷಾ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಐವರನ್ನು ತಕ್ಷಣವೇ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಚ್ಚಿನೇಟು ಮತ್ತು ಆಸಿಡ್ ದಾಳಿಯಿಂದ ತತ್ತರಿಸಿರುವ ಕುಟುಂಬಸ್ಥರ ಪೈಕಿ ತಾಸಿನಾ ಬಾನು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಪೊಲೀಸ್ ತನಿಖೆ:

ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗದ ನೆಹರು ನಗರದ ನಿವಾಸಿಯಾಗಿರುವ ಆರೋಪಿ ಸುಹಿಲ್ ಭಾಷಾ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದು, ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪತ್ನಿ ತನ್ನ ಸಂಬಂಧ ಕಡಿದುಕೊಂಡಿದ್ದಾಳೆ ಎಂಬ ಕೋಪದಿಂದಲೇ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಚಿತ್ರದುರ್ಗದಲ್ಲಿ ಭೀಕರ ಆಸಿಡ್ ದಾಳಿ ನಡೆದಿರುವುದು ನಾಗರಿಕರನ್ನು ಬೆಚ್ಚಿಬೀಳಿಸಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

WhatsApp Group Join Now

Spread the love

Leave a Reply