ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆಯಾಗಿತ್ತು. ಆ ಸಂಬಂಧದಲ್ಲಿ ಕಿರುಕುಳ ಮತ್ತು ಹಿಂಸೆ ಇದ್ದ ಕಾರಣ ನಾನು ಅವರಿಗೆ ವಿಚ್ಛೇದನ ನೀಡಿದೆ ಎಂದು ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಎಚ್ಡಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ್ದ ಖರ್ಗೆ ಅವರು, “ದೇವೇಗೌಡರು ಮೊದಲು ಕಾಂಗ್ರೆಸ್ ಜೊತೆ ಪ್ರೀತಿಯಲ್ಲಿದ್ದರು, ಆದರೆ ಕೊನೆಗೆ ಮೋದಿ (ಬಿಜೆಪಿ) ಅವರ ಜೊತೆ ಮದುವೆಯಾದರು” ಎಂದು ಹಾಸ್ಯಮಯವಾಗಿ ಕಾಲೆಳೆದಿದ್ದರು. ಇದಕ್ಕೆ ಬೆಂಗಳೂರಿನಿಂದ ಪತ್ರ ಬರೆದಿರುವ ದೇವೇಗೌಡರು, ಅದೇ ಮದುವೆ – ವಿಚ್ಛೇದನದ ರೂಪಕಗಳನ್ನು ಬಳಸಿ ಮಾರ್ಮಿಕವಾಗಿ ಮತ್ತು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಬಲವಂತದ ಮದುವೆ ಮತ್ತು ವಿಚ್ಛೇದನ
“ನನ್ನ ಹಳೆಯ ಗೆಳೆಯ ಖರ್ಗೆ ಅವರು ಮದುವೆಯ ಭಾಷೆಯಲ್ಲೇ ಮಾತನಾಡಿದ್ದಾರೆ. ಅದಕ್ಕೆ ನಾನು ಅದೇ ಭಾಷೆಯಲ್ಲಿ ಉತ್ತರಿಸುವುದಾದರೆ, ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆ ಆಗಿತ್ತು. ಆ ಸಂಬಂಧದಲ್ಲಿ ಕಿರುಕುಳ ಮತ್ತು ಹಿಂಸೆ ಇದ್ದ ಕಾರಣ ನಾನು ಅವರಿಗೆ ‘ವಿಚ್ಛೇದನ’ ನೀಡಬೇಕಾಯಿತು” ಎಂದು ದೇವೇಗೌಡರು ಬರೆದಿದ್ದಾರೆ.
ಖರ್ಗೆ ಅವರನ್ನೇ ಸಿಎಂ ಮಾಡಲು ಬಯಸಿದ್ದೆ
2018 ರ ರಾಜಕೀಯ ವಿದ್ಯಮಾನಗಳನ್ನು ನೆನಪಿಸಿಕೊಂಡಿರುವ ಗೌಡರು, ” 2018 ರಲ್ಲಿ ಗುಲಾಂ ನಬಿ ಆಜಾದ್ ಅವರು ಬಂದು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರು. ಆದರೆ, ನಾನು ಅದಕ್ಕೆ ಒಪ್ಪಿರಲಿಲ್ಲ. ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಎಲ್ಲರ ಸಮ್ಮುಖದಲ್ಲೇ ಹೇಳಿದ್ದೆ. ಆಗ ಸಿದ್ದರಾಮಯ್ಯ ಕೂಡ ಅಲ್ಲಿದ್ದರು. ಆದರೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕೆಂದು ಪಟ್ಟು ಹಿಡಿದರು” ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.
2019ರ ವಿಶ್ವಾಸದ್ರೋಹ
2018 ರಲ್ಲಿ ಇಷ್ಟೆಲ್ಲಾ ನಾಟಕವಾಡಿ ಮೈತ್ರಿ ಮಾಡಿಕೊಂಡ ಕಾಂಗ್ರೆಸ್, 2019 ರಲ್ಲಿ ನಮ್ಮನ್ನು ಕೈಬಿಟ್ಟಿತು. ಕಾಂಗ್ರೆಸ್ ಶಾಸಕರು ಬಿಜೆಪಿಗೆ ವಲಸೆ ಹೋಗಲು ಯಾರು ಪ್ರಚೋದನೆ ನೀಡಿದರು ಎಂಬುದು ಜಗತ್ತಿಗೇ ತಿಳಿದಿದೆ. ಅಂದು ಶಾಸಕರನ್ನು ಎತ್ತಿಕಟ್ಟಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಗೆಳೆಯ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿದ್ದರು” ಎಂದು ಪರೋಕ್ಷವಾಗಿ ರಾಜ್ಯ ನಾಯಕರತ್ತ ಬೆರಳು ಮಾಡಿದ್ದಾರೆ.
ಸ್ಥಿರ ಮೈತ್ರಿಗಾಗಿ ಬಿಜೆಪಿ ಜೊತೆ ಕೈಜೋಡಿಸಿದೆ
ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟು ಬರಲಿಲ್ಲ. ಅವರೇ ನಮ್ಮಿಂದ ದೂರ ಹೋದರು. ನನಗೆ ಬೇರೆ ದಾರಿಯಿಲ್ಲದೆ ಸುಸ್ಥಿರ ಮೈತ್ರಿಗಾಗಿ ಕಾಂಗ್ರೆಸ್ಗೆ ವಿಚ್ಛೇದನ ನೀಡಿ ಹೊರಬರಬೇಕಾಯಿತು ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಆಚರಣೆಯಲ್ಲಿದ್ದ ಕಾರಣ ತಮಗೆ ಸಂಸತ್ತಿನಲ್ಲಿ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.