ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಸುಖ ಸಂಸಾರ ನಡೆಸಿದ್ದ ದಂಪತಿ ನಡುವೆ ಅನುಮಾನದ ಕಿಚ್ಚು ಹೊತ್ತಿಕೊಂಡಿದ್ದು, ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಚೌಡೇಶ್ವರಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಮಮತಾ (32) ಎಂದು ಗುರುತಿಸಲಾಗಿದೆ. ಇದೀಗ ಕೊಲೆ ಮಾಡಿದ ಪತಿ ರಂಗನಾಥ್ ಪೊಲೀಸರ ವಶದಲ್ಲಿದ್ದಾನೆ.
ಅಜ್ಜಂಪುರ ತಾಲೂಕಿನ ಬುರುಡೆಕಟ್ಟೆ ಗ್ರಾಮದ ರಂಗನಾಥ್ ಮತ್ತು ಮಮತಾ ಪರಸ್ಪರ ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. 7 ವರ್ಷಗಳ ಹಿಂದೆ ಇವರು ಬೀರೂರಿಗೆ ಬಂದು ನೆಲೆಸಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಗಾರೆ ಕೆಲಸ ಮಾಡಿಕೊಂಡು ರಂಗನಾಥ್ ಸುಖ ಸಂಸಾರವನ್ನು ನಡೆಸುತ್ತಿದ್ದ. ಇತ್ತ ಗಂಡನಿಗೆ ಸಹಾಯವಾಗಲಿ ಎಂದು ಮಮತಾ ಕೂಡ ಅಡಿಕೆ ಸುಲಿಯುವ ಮತ್ತು ಮದುವೆ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸದ ನಿಮಿತ್ತ ಹೊರಹೋಗುತ್ತಿದ್ದ ಮಮತಾಗೆ ಮೊಬೈಲ್ ಚಟ ಹೆಚ್ಚಾಗಿತ್ತು. ಇದರಿಂದ ಹಲವಾರು ಪುರುಷರ ಜೊತೆ ಅವರು ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯ ರಂಗನಾಥ್ ಮನಸ್ಸಿನಲ್ಲಿ ಇತ್ತು.
ಫೆಬ್ರವರಿ 4 ರ ಸಂಜೆ ಮಗನ ಹುಟ್ಟುಹಬ್ಬದ ಆಚರಣೆಗೆ ಮನೆಯಲ್ಲಿ ಸಿದ್ಧತೆ ನಡೆದಿತ್ತು. ಇದೇ ವೇಳೆ ಮಮತಾ ಮೊಬೈಲ್‌ನಲ್ಲೇ ಬ್ಯುಸಿಯಾಗಿರುವುದನ್ನು ನೋಡಿ ರಂಗನಾಥ್ ಕೋಪ ನೆತ್ತಿಗೇರಿದೆ. ಇದೇ ಸಿಟ್ಟಿನಲ್ಲಿ ಆಕ್ರೋಶಗೊಂಡ ರಂಗನಾಥ್, ಮಕ್ಕಳ ಮುಂದೆಯೇ ಗಲಾಟೆ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ, ಮಮತಾಳನ್ನು ನೆಲಕ್ಕೆ ಕೆಡವಿ ಕತ್ತು ಹಿಸುಕಿ, ವೇಲ್‌ನಿಂದ ಬಿಗಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಹತ್ಯೆಯ ನಂತರ ರಾತ್ರಿಯಿಡೀ ಹೆಂಡತಿಯ ಶವ ಮತ್ತು ಮಕ್ಕಳ ಜೊತೆಯೇ ಕಳೆದ ಹಂತಕ ರಂಗನಾಥ್, ಫೆಬ್ರವರಿ 5ರ ಗುರುವಾರ ಬೆಳಗ್ಗೆ ಬೀರೂರು ಪೊಲೀಸ್ ಠಾಣೆಗೆ ಹೋಗಿ, ಸರ್.. ನನ್ನ ಹೆಂಡತಿ ರಾತ್ರಿ ಚೆನ್ನಾಗಿದ್ದಳು, ಬೆಳಗ್ಗೆ ಎದ್ದೇಳುತ್ತಿಲ್ಲ ಎಂದು ಕಥೆ ಕಟ್ಟಿದ್ದಾನೆ. ಆದರೆ ಮನೆಗೆ ಬಂದು ಪರಿಶೀಲಿಸಿದ ಪೊಲೀಸರಿಗೆ ಕುತ್ತಿಗೆಯ ಮೇಲಿದ್ದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಖಚಿತವಾಗಿದೆ. ವಿಚಾರಣೆ ನಡೆಸಿದಾಗ ರಂಗನಾಥ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಜೈಲು ಪಾಲಾಗಿದ್ದಾನೆ.
ಸದ್ಯ ತಂದೆ-ತಾಯಿಯ ನಡುವಿನ ಜಗಳ ಮತ್ತು ಅನುಮಾನಕ್ಕೆ ಇಬ್ಬರು ಮುಗ್ಧ ಮಕ್ಕಳು ಅನಾಥರಾಗಿದ್ದಾರೆ.
12 ವರ್ಷಗಳ ಸುಖ ಸಂಸಾರವನ್ನು ಭಗ್ನಗೊಳಿಸಿದ ಮೊಬೈಲ್- ಪತಿಯಿಂದ್ಲೇ ಪತ್ನಿ ಕೊನೆಯುಸಿರು!
WhatsApp Group
Join Now