ಲೋಕಾಯುಕ್ತ ಪೊಲೀಸರು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ 11 ಕಡೆಗಳಲ್ಲಿ ನಡೆದ ಈ ದಾಳಿಯಲ್ಲಿ, ಕೋಟ್ಯಂತರ ಮೌಲ್ಯದ ಆಸ್ತಿ, ಶಾಲೆಗಳು, ಮನೆಗಳು, ನಗದು ಮತ್ತು ಚಿನ್ನಾಭರಣ ಪತ್ತೆಯಾಗಿವೆ.
ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಗುರುವಾರ ಬೆಳ್ಳಂಬೆಳಗ್ಗೆ ಲೋಕೋಪಯೋಗಿ ಇಲಾಖೆಯ (PWD) ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಅವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ ಅಧಿಕಾರಿಗಳು ಕಂಡ ದೃಶ್ಯ ಕಂಡು ದಂಗಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಒಟ್ಟು 11 ಕಡೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬೆಂಗಳೂರಿನ 6 ಕಡೆ ಮತ್ತು ಮೈಸೂರಿನ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಪುರುಷೋತ್ತಮ್ ಅವರ ನಾಲ್ಕು ಅಂತಸ್ತಿನ ಭವ್ಯ ಬಂಗಲೆಗೆ ನುಗ್ಗಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ಪುರುಷೋತ್ತಮ್ ಮನೆಯಲ್ಲೇ ಇದ್ದು, ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆಯೂ ದಾಳಿ ಮುಂದುವರಿದಿದೆ.
ಈ ದಾಳಿಯ ಅತ್ಯಂತ ಆಘಾತಕಾರಿ ಅಂಶವೆಂದರೆ ಪುರುಷೋತ್ತಮ್ ಅವರು ಮೈಸೂರಿನಲ್ಲಿ ಎರಡು ಶಾಲೆಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಸುಮಾರು ಐದಾರು ಸ್ವಂತ ಮನೆಗಳನ್ನು ನಿರ್ಮಿಸಿರುವುದು ಪತ್ತೆಯಾಗಿದೆ. “ಇದು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಮೈಸೂರಿನಲ್ಲಿ 5 ಕಡೆ ಮತ್ತು ಬೆಂಗಳೂರಿನಲ್ಲಿ 6 ಕಡೆ ಪರಿಶೀಲನೆ ನಡೆಸುತ್ತಿದ್ದೇವೆ. ಅವರ ಹೆಸರಿನಲ್ಲಿ ಎರಡು ಶಾಲೆಗಳು, ಹಲವು ಸೈಟ್ ದಾಖಲೆಗಳು, ಮನೆಗಳು ಇರುವುದು ದೃಢಪಟ್ಟಿದೆ,” ಎಂದು ಎಸ್ಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.
ಪರಿಶೀಲನೆ ವೇಳೆ ಪುರುಷೋತ್ತಮ್ ಅವರ ನಿವಾಸದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಸದ್ಯ ಚಿನ್ನದ ಮೌಲ್ಯಮಾಪನ ಮತ್ತು ನಗದು ಎಣಿಕೆ ಕಾರ್ಯ ನಡೆಯುತ್ತಿದೆ. ಆಸ್ತಿ ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ವಿಶೇಷವೆಂದರೆ, ಈ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಪುರುಷೋತ್ತಮ್ ಅವರು ‘ಸತ್ಯಕಾಮ ಜಾಬಾಲ’ ಎಂಬ ಹೆಸರಿನ ಪುಸ್ತಕವನ್ನೂ ಬರೆದಿದ್ದಾರೆ ಎನ್ನಲಾಗಿದೆ. ಸಾಹಿತ್ಯಿಕ ಅಭಿರುಚಿಯ ನಡುವೆಯೇ ಇಷ್ಟೊಂದು ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿರುವುದು ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಲೋಕಾಯುಕ್ತ ಪೊಲೀಸರು ಸದ್ಯ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದು, ಸಂಜೆಯ ವೇಳೆಗೆ ಸಂಪೂರ್ಣ ಆಸ್ತಿಯ ಮೌಲ್ಯದ ವಿವರ ಲಭ್ಯವಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಈ ದಾಳಿ ಸದ್ದನ್ನುಂಟು ಮಾಡಿದ್ದು, ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಪಿಡಬ್ಲ್ಯೂಡಿ ಇಂಜಿನಿಯರ್ ಪುರುಷೋತ್ತಮ್‌ಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ!
WhatsApp Group
Join Now