ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಯುವತಿ ಮತ್ತು ಆಕೆಯ ಸಂಬಂಧಿಕರು, ಸ್ನೇಹಿತರಿಂದ ಸುಮಾರು 1.75 ಕೋಟಿ ಹಣ ಪಡೆದು ವಂಚಿಸಿದ ಆರೋಪ ಕೇಳಿಬಂದಿದೆ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಯುವತಿಗೆ 2024 ಮಾರ್ಚ್ನಲ್ಲಿ ಆರೋಪಿ ಪರಿಚಯವಾಗಿದ್ದ.
ತಾನು ದೊಡ್ಡ ಉದ್ಯಮಿ, 715 ಕೋಟಿ ಆಸ್ತಿ ಇದೆ ಎಂದು ಹೇಳಿಕೊಂಡಿದ್ದ ಈತ ತಂದೆಯನ್ನ ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿದ್ದ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಯುವತಿಗೆ ಹೇಳಿದ್ದಲ್ಲದೆ, ಕೆಂಗೇರಿ ಬಳಿ ಕರೆಸಿಕೊಂಡು ಮನೆಯವರಿಗೆ ಪರಿಚಯಿಸಿದ್ದ ಎನ್ನಲಾಗಿದೆ.
ಬಳಿಕ ತನ್ನ ಆಟ ಶುರುಮಾಡಿದ್ದ ಈತ, ಆಸ್ತಿ ಸಂಬಂಧ ಇಡಿಯಲ್ಲಿ ಕೇಸ್ ದಾಖಲಾಗಿದೆ ಮತ್ತು ಅಕೌಂಟ್ ಪ್ರಾಬ್ಲಂ ಆಗಿದೆ ಎಂದಿದ್ದ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನ ತೋರಿಸಿದ್ದ. ಹಣದ ಅವಶ್ಯಕತೆ ಇದೆ ಎಂದು ಮೊದಲು 15 ಸಾವಿರ ಹಣ ಪಡೆದು, ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಅಂತಾ ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದ. ಜೊತೆಗೆ ಯುವತಿ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದ. ಹಂತ ಹಂತವಾಗಿ ಒಟ್ಟು 1.75 ಕೋಟಿ ಹಣ ಪಡೆದಿದ್ದ ಎಂದು ದೂರಲಾಗಿದೆ.
ಇನ್ನು ಒಮ್ಮೆ 22 ಲಕ್ಷ ಹಣ ವಾಪಸ್ ಕೊಟ್ಟಿದ್ದ ಈತ ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಾನೆ. ಈ ಬಗ್ಗೆ ಕೇಳಿದ್ದಕ್ಕೆ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈತನ ಹಿನ್ನೆಲ ಕೆದಕಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ. ಅದಾಗಲೇ ಮದುವೆಯಾಗಿ ಮಗು ಇದ್ದರೂ ಮತ್ತೊಬ್ಬ ಯುವತಿಗೆ ಮದುವೆ ಆಮಿಷ ಒಡ್ಡಿದ್ದಲ್ಲದೆ, ಹಣ ಪೀಕಿರೋದು ಬಟಾಬಯಲಾಗಿದೆ. ಅಲ್ಲದೆ ಮನೆಯವರ ಪರಿಚಯದ ವೇಳೆ ತಾನು ತಾಳಿ ಕಟ್ಟಿರುವ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಎಂಬ ವಿಷಯವೂ ಗೊತ್ತಾಗಿದೆ. ಮೋಸ ಹೋದ ವಿಚಾರ ತಿಳಿಯುತ್ತಿದ್ದಂತೆ ಯುವತಿ ವೈಟ್ಫೀಲ್ಡ್ ಠಾಣೆಗೆ ದೂರು ನೀಡಿದ್ದು, ವಿಜಯ್ ರಾಜ್ ಗೌಡ, ಬೊರೇಗೌಡ, ಸೌಮ್ಯ ಎಂಬವರ ವಿರುದ್ಧ ಕೇಸ್ ದಾಖಲಾಗಿದೆ. ಬಳಿಕ ಪ್ರಕರಣವನ್ನು ಪೊಲೀಸರು ಕೆಂಗೇರಿ ಠಾಣೆಗೆ ವರ್ಗಾಯಿಸಿದ್ದು, ತನಿಖೆ ಮುಂದುವರಿದಿದೆ.
ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ : ವ್ಯಕ್ತಿ ವಂಚನೆ ಕಂಡು ಯುವತಿ ಕಕ್ಕಾಬಿಕ್ಕಿ
WhatsApp Group
Join Now