ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ.? 8 ತಿಂಗಳ ಕಂದಮ್ಮನ ರಕ್ಷಣೆ – ಜೀವ ಉಳಿಸಿದ ಚೈಲ್ಡ್‌ಲೈನ್ ಕರೆ!

Spread the love

ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಮಾನವೀಯತೆ ತಲೆತಗ್ಗಿಸುವ ಘಟನೆ ಬೆಳಕಿಗೆ ಬಂದಿದೆ. ನಿಧಿ ಸಿಗಲಿ ಎಂಬ ಅಂಧ ನಂಬಿಕೆಯ ಹಿನ್ನೆಲೆಯಲ್ಲಿ ದತ್ತು ಪಡೆದ 8 ತಿಂಗಳ ಗಂಡು ಮಗುವನ್ನು ಬಲಿ ಕೊಡುವ ತಯಾರಿ ನಡೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಮಯಕ್ಕೆ ಸರಿಯಾಗಿ ಮಾಹಿತಿ ದೊರಕಿದ್ದರಿಂದ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಲಿ ಪೂಜೆಗೆ ಸಿದ್ಧತೆ?

ಸೂಲಿಬೆಲೆ ಗ್ರಾಮದ ಜನತಾ ಕಾಲೋನಿಯಲ್ಲಿರುವ ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ಈ ಭಯಾನಕ ಕೃತ್ಯ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮನೆ ಒಳಗೆ ಗುಂಡಿ ತೆಗೆದು, ಪೂಜಾ ಸಾಮಗ್ರಿಗಳನ್ನು ಇಟ್ಟು, ಬಲಿ ಪೂಜೆಗೆ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ. ಈ ಘಟನೆ ಸ್ಥಳೀಯರಲ್ಲೂ ಆತಂಕಕ್ಕೆ ಕಾರಣವಾಗಿದೆ.

ಅಪರಿಚಿತರಿಂದ ಸಹಾಯವಾಣಿಗೆ ಕರೆ!

ನೆನ್ನೆ ಹುಣ್ಣಿಮೆ ದಿನವಾಗಿದ್ದ ಹಿನ್ನೆಲೆ, ಮಗುವಿಗೆ ಬಲಿ ನೀಡಲು ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಅಪರಿಚಿತ ವ್ಯಕ್ತಿಗಳಿಂದ ಮಕ್ಕಳ ಸಹಾಯವಾಣಿ (ಚೈಲ್ಡ್‌ಲೈನ್) ಗೆ ಬಂದಿತ್ತು. ಕರೆ ಸ್ವೀಕರಿಸಿದ ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಸೂಲಿಬೆಲೆ ಗ್ರಾಮಕ್ಕೆ ತೆರಳಿ ದಾಳಿ ನಡೆಸಿದ್ದಾರೆ. ದೂರು ಸಂಬಂಧಿತ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಒಂದು ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿರುವುದು ಕಂಡುಬಂದಿದೆ. ಪೂಜಾ ಸಾಮಗ್ರಿಗಳು, ಧೂಪ, ಹೂವುಗಳು ಮತ್ತು ಇತರೆ ವಸ್ತುಗಳು ಪತ್ತೆಯಾಗಿದ್ದು, ಬಲಿ ಪೂಜೆ ನಡೆಸಲು ಸಿದ್ಧತೆ ನಡೆದಿರುವ ಶಂಕೆ ಬಲಪಡಿಸಿದೆ.

8 ತಿಂಗಳ ಮಗು ವಶಕ್ಕೆ!

ಅಧಿಕಾರಿಗಳು ಮನೆ ಪರಿಶೀಲನೆ ವೇಳೆ 8 ತಿಂಗಳ ಗಂಡು ಮಗುವನ್ನು ಪತ್ತೆಹಚ್ಚಿದ್ದಾರೆ. ಈ ಮಗುವನ್ನು ಸುಮಾರು 8 ತಿಂಗಳ ಹಿಂದೆ ಬೇರೆಯವರಿಂದ ಖರೀದಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮಗುವಿನ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಶಕ್ಕೆ ಪಡೆದು, ಶಿಶು ಕೇಂದ್ರಕ್ಕೆ ರವಾನಿಸಲಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಪ್ರಸ್ತುತ ವೈದ್ಯಕೀಯ ಪರಿಶೀಲನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಪಾಯ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಲಯದ ಮೂಲಗಳು ತಿಳಿಸಿವೆ.

ತನಿಖೆಗೆ ಆದೇಶ!

ಈ ಘಟನೆಗೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿ (CWC) ಗಂಭೀರವಾಗಿ ತನಿಖೆ ಕೈಗೊಂಡಿದೆ. ಮಗು ಖರೀದಿ ಆರೋಪ, ಬಲಿ ಪೂಜೆ ಶಂಕೆ, ಅಂಧ ನಂಬಿಕೆ ಆಚರಣೆ ಸೇರಿ ಎಲ್ಲಾ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸೈಯದ್ ಇಮ್ರಾನ್ ಸೇರಿ ಇತರರ ಪಾತ್ರದ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ಸ್ಥಳೀಯರಲ್ಲಿ ಆಘಾತ!

ಸೂಲಿಬೆಲೆ ಗ್ರಾಮದಲ್ಲಿ ಮಾನವಕುಲಕ್ಕೆ ದಕ್ಕೆ ತರುವಂಥ ಘಟನೆ ನಡೆದಿದೆ. ಇಂತಹ ಅಂಧ ನಂಬಿಕೆಗಳು ಇನ್ನೂ ಸಮಾಜದಲ್ಲಿ ಜೀವಂತವಾಗಿರುವುದು ಆತಂಕಕಾರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಜೀವ ಉಳಿದಿರುವುದು ದೇವರ ಕೃಪೆ ಎಂದು ಕೆಲವರು ಹೇಳುತ್ತಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಈ ಪ್ರಕರಣವು ಮಕ್ಕಳ ಸುರಕ್ಷತೆ, ಅಂಧ ನಂಬಿಕೆಗಳ ವಿರುದ್ಧ ಜಾಗೃತಿ ಮತ್ತು ಕಾನೂನು ಜಾರಿ ವ್ಯವಸ್ಥೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದಂತಾಗಿದೆ.

WhatsApp Group Join Now

Spread the love

Leave a Reply