ಬೆಂಗಳೂರು ಟೆಕ್ಕಿ ತೇಜಸ್ ಎಂಬವರನ್ನು ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ನೆಪದಲ್ಲಿ ಮೋಸಮಾಡಿ 48 ಲಕ್ಷ ರೂ. ವಂಚಿಸಿದ ವಿಜಯ್ ಗುರೂಜಿಯನ್ನು ಕೆಲ ದಿನಗಳ ಹಿಂದೆಯಷ್ಟೆ ಪೊಲೀಸರು ಬಂಧಿಸಿದ್ದರು. ಇದೀಗ ಗುರೂಜಿಯ ಸಹಚರನನ್ನೂ ಸಹ ಜ್ಞಾನ ಭಾರತಿ ಪೊಲೀಸರು ಅರೆಸ್ಟ್ ಮಾಡಿದ್ದು, ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ತೆಲಂಗಾಣದಲ್ಲಿ ಸೆರೆಸಿಕ್ಕ ಆರೋಪಿ
ವಿಜಯ್ ಗುರೂಜಿ ಮತ್ತು ಆತನ ಸಹಚರರಿಂದ ಮೋಸ ಹೋದ ಟೆಕ್ಕಿ ತೇಜಸ್, ತೀವ್ರ ಅನಾರೋಗ್ಯ ಸಮಸ್ಯೆ ಎದುರಾದಾಗ ಪೊಲೀಸರಲ್ಲಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ಗುರೂಜಿಯನ್ನು ಬಂಧಿಸಲಾಗಿತ್ತು. ಇದೀಗ ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನು ತೆಲಂಗಾಣದ ಸೈಬರಬಾದ್ನಲ್ಲಿ ಸೆರೆಹಿಡಿಯಲಾಗಿದೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ಆರೋಪಿಗಳು, ಬೆಂಗಳೂರು, ತುಮಕೂರು ಸೇರಿ ಒಟ್ಟು ಎಂಟು ಟೆಂಟ್ ಗಳನ್ನು ಹೊಂದಿದ್ದರೆಂದು ತಿಳಿದು ಬಂದಿದೆ. ಆರೋಪಿಗಳಿಗೆ ಟೆಕ್ಕಿ ನೀಡಿದ್ದ 40 ಲಕ್ಷದಲ್ಲಿ 19.50 ಲಕ್ಷ ಹಣವನ್ನು ವಶಕ್ಕೆ ಪಡೆದ ಪೊಲೀಸರು, ಒಂದು ಟಿ.ಟಿ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರತಿಕ್ರಿಯೆ
ಈ ಪ್ರಕರಣದ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ನಕಲಿ ಗುರೂಜಿ ವಿಜಯ್ ಚಿತ್ತೋಡಿಯಾನನ್ನು ಬಂಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಅರಿವು ಪಡೆದುಕೊಳ್ಳಬೇಕಾಗುತ್ತದೆ. ಸದ್ಯ ನಾವು ಆರೋಪಿಗಳನ್ನು ಬಂಧಿಸಿ ಹಣ ವಶಕ್ಕೆ ಪಡೆದಿದ್ದೇವೆ. ಯಾರಿಗೆ ಸಮಸ್ಯೆ ಇದೆಯೋ ಅವರು ಅಧಿಕೃತ ಆಸ್ಪತ್ರೆಗೆ ಭೇಟಿ ನೀಡಿ. ಈ ರೀತಿ ಟೆಂಟ್ನಲ್ಲಿ ಇದ್ದವರ ಕಡೆ ಹೋದರೆ ಸಮಸ್ಯೆ ಆಗುತ್ತದೆ. ಈ ರೀತಿ ಕೆಲಸ ಮಾಡುತ್ತಿದ್ದವರ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿ ಟೆಂಟ್ನಲ್ಲಿ ಚಿಕಿತ್ಸೆ ನೀಡುವವರ ದಾಖಲಾತಿ ಪರಿಶೀಲಿಸಲಾಗುತ್ತದೆ.ಈ ಪ್ರಕರಣದಲ್ಲಿ ಚಿಕಿತ್ಸೆ ಪಡೆದಿದ್ದ ದೂರುದಾರನಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಆತನ ಜೀವಕ್ಕೂ ಅಪಾಯ ಉಂಟಾಗಬಹುದು. ಹೀಗಾಗಿ ಟೆಂಟ್ನಲ್ಲಿರುವ ವ್ಯಕ್ತಿಗಳ ಬಳಿ ಯಾರೂ ಚಿಕಿತ್ಸೆ ಪಡೆಯಬೇಡಿ ಎಂದಿದ್ದಾರೆ.
ಇಡೀ ರಾಜ್ಯದಲ್ಲಿ ಹಬ್ಬಿದ್ದ ನಕಲಿ ಲೈಂಗಿಕ ಔಷಧಿ ಜಾಲ ; ಗುಜರಾತ್ ಮೂಲದ ಆರೋಪಿ ಮನೋಜ್ ಅಂದರ್
WhatsApp Group
Join Now