ನಾಗರಿಕರ ಸುರಕ್ಷತೆಗಾಗಿ ಕಾವಲಿನಲ್ಲಿರಬೇಕಾದ ಕೆಲ ಪೊಲೀಸ್ ಸಿಬ್ಬಂದಿಯ ಕಳ್ಳಾಟಗಳು ನಿರಂತರವಾಗಿ ಬಯಲಾಗುತ್ತಿದ್ದು, ಇಲಾಖೆಯ ಗೌರವಕ್ಕೆ ಗಂಭೀರ ಧಕ್ಕೆ ತಂದಿವೆ. ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಬಂಧನವಾಗಿರುವುದು ಮರೆಸುವ ಮುನ್ನವೇ, ಇದೀಗ ಸೈಬರ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಜೆ.ಬಿ. ಉಲ್ಲಾ ಎಂಬಾತನಿಂದ ಲಕ್ಷಾಂತರ ರೂಪಾಯಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿಯೇ ಕರೆದುಕೊಂಡು ಬಂದಿದ್ದಾಗ ಈ ಘಟನೆ ಸಂಭವಿಸಿರುವುದು ಆಶ್ಚರ್ಯಕರ ಸಂಗತಿ.
ವಿಚಾರಣೆಗೆ ತಂದ ಆರೋಪಿ ಕಾರಿನಲ್ಲಿದ್ದ 11 ಲಕ್ಷ ರೂಪಾಯಿ ನಾಪತ್ತೆ!
ಸೈಬರ್ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ, ವಿಚಾರಣೆಗೆ ಕರೆದೊಯ್ಯುವ ವೇಳೆಗೆ ತನ್ನ ಕಾರಿನಲ್ಲಿ 11 ಲಕ್ಷ ರೂಪಾಯಿ ಇರುವ ಬ್ಯಾಗ್ ಇಟ್ಟಿದ್ದ. ವಿಚಾರಣೆಯ ನಂತರ ಆತನನ್ನು ಜೈಲಿಗೆ ಕಳಿಸಲಾಯಿತು. ನಂತರ ಜಾಮೀನು ಪಡೆದು ಆತ ಹೊರಬಂದಾಗ, ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿರುವುದು ಅವನ ಗಮನಕ್ಕೆ ಬಂದಿತು. ಆರೋಪಿ ತಕ್ಷಣವೇ ಸೈಬರ್ ಠಾಣೆಯ ಸಿಬ್ಬಂದಿಯವರ ಗಮನಕ್ಕೆ ಈ ವಿಚಾರ ತಂದಾಗ, ಅಧಿಕಾರಿಗಳು ಮೊದಲಿಗೆ ಗಾಬರಿಗೊಂಡರು ಬಳಿಕ ಸಿಸಿಟಿವಿ ಚಿತ್ರೀಕರಣವನ್ನು ಪರಿಶೀಲಿಸಿದರು. ಈ ಪರಿಶೀಲನೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಜೆ.ಬಿ. ಉಲ್ಲಾ ಕಾರಿನಲ್ಲಿದ್ದ 11 ಲಕ್ಷ ರೂಪಾಯಿ ಹಣದ ಬ್ಯಾಗ್‌ನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿತು.
ಸಿ.ಸಿ.ಟಿ.ವಿ ಕ್ಯಾಮರಾ ಬಯಲಿಗೆಳೆದ ಕಳ್ಳತನ
ಸಿಸಿಟಿವಿ ದೃಶ್ಯಾವಳಿಯಲ್ಲಿ ಜೆಬಿ ಉಲ್ಲಾ ಆರೋಪಿಯ ಕಾರಿನತ್ತ ಹೋಗಿ, ಬ್ಯಾಗ್‌ನ್ನು ಎತ್ತಿಕೊಂಡು ಆರಾಮವಾಗಿ ಹೋಗಿರುವುದು ಸೆರೆಯಾಗಿದೆ. ಹಣ ಕದ್ದ ನಂತರ ತನಗೇನೂ ಗೊತ್ತಿಲ್ಲ ಎನ್ನುವಂತೆ ಹಲವು ದಿನಗಳಿಂದ ಸಾಮಾನ್ಯವಾಗಿ ಕೆಲಸಕ್ಕೆ ಬರುತ್ತಿದ್ದುದೂ ಗಮನಾರ್ಹ. ಘಟನೆಯ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರಿಗೆ ದೂರು ಸಲ್ಲಿಸಲಾಯಿತು. ಸೈಬರ್ ಪೊಲೀಸರು ಜೆಬಿ ಉಲ್ಲಾ ಅವರ ಮನೆಗೆ ಸರ್ಚ್ ಮಾಡಲು ತೆರಳಿದಾಗ, ಆತ ಮನೆಯ ಒಳಬಿಡದೆ ಗಲಾಟೆ ಮಾಡಿದ್ದಾನೆಂದು ತಿಳಿದುಬಂದಿದೆ.
ಪೊಲೀಸರು ಮನೆಯ ಒಳ ಭಾಗ ಪರಿಶೀಲಿಸಿದಾಗ, ಮಲಗುವ ಕೋಣೆಯ ಬೆಡ್ ಕೆಳಗೆ ಲಕ್ಷಾಂತರ ರೂ. ಹಣವನ್ನು ಜೋಡಿಸಿ ಇಟ್ಟಿದ್ದು ಪತ್ತೆಯಾಯಿತು. ಕದ್ದ ಹಣದಿಂದಲೇ ತನ್ನ ಪತ್ನಿಗೆ ಆಭರಣಗಳನ್ನು ಕೊಟ್ಟಿರುವುದು ಕೂಡಾ ತನಿಖೆಯಲ್ಲಿ ಬಹಿರಂಗವಾಗಿದೆ. ಕದ್ದ ಹಣದಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ನಗರದ ಪೊಲೀಸರನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಇಲಾಖೆಯ ಗೌರವದ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಇದಕ್ಕೂ ಮುನ್ನ ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಬಂಧಿತನಾಗಿದ್ದ. ಜೆಪಿ ನಗರದಲ್ಲಿ ಸೀನಿಯರ್ ಸಿಟಿಜನ್ ಬಳಿ ಹಣ ಪಡೆದ ಆರೋಪ, ಬೆಳ್ಳಂದೂರು ಪೊಲೀಸ್ ಠಾಣೆಯ ಮೇಲೆ ಬಂದಿದ್ದ ಮಾರಣಾಂತಿಕ ಪ್ರಕರಣದಲ್ಲಿ ಹಣ ಪಡೆದ ಆರೋಪ ಇವೆಲ್ಲವೂ ಇಲಾಖೆಯೊಳಗಿನ ಶಿಸ್ತು ಕೊರತೆ ಸ್ಪಷ್ಟಪಡಿಸುತ್ತಿವೆ.
ರಾಜ್ಯ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಮತ್ತೊಬ್ಬ ಸಿಬ್ಬಂದಿ, ಬರೋಬ್ಬರಿ 11 ಲಕ್ಷ ಕದ್ದು ಹೆಂಡತಿಗೆ ಚಿನ್ನ ಉಡುಗೊರೆ.!
WhatsApp Group
Join Now