ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್: ಮುಂಜಾನೆ ಕಂಡುಬರುವ ಈ 6 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Spread the love

ಸಾಮಾನ್ಯವಾಗಿ ಹೃದಯಾಘಾತ (ಹಾರ್ಟ್ ಅಟ್ಯಾಕ್) ಎಂದರೆ ಎದೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ ಎಂದೇ ಭಾವಿಸಲಾಗುತ್ತದೆ. ಆದರೆ, ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಬರುವ ‘ಸೈಲೆಂಟ್ ಹಾರ್ಟ್ ಅಟ್ಯಾಕ್’ ಅತ್ಯಂತ ಅಪಾಯಕಾರಿಯಾಗಿದ್ದು, ಪ್ರಾಣಕ್ಕೇ ಕಂಟಕವಾಗಬಹುದು.

ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಮುಂಜಾನೆಯ ವೇಳೆಯಲ್ಲಿ ಶರೀರದಲ್ಲಿ ರಕ್ತದೊತ್ತಡ ಮತ್ತು ಹಾರ್ಮೋನ್‌ಗಳಲ್ಲಿ ಏರಿಳಿತ ಉಂಟಾಗುವುದರಿಂದ ಈ ಸಮಯದಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕಂಡುಬರುವ ಕೆಲ ಪ್ರಮುಖ ಲಕ್ಷಣಗಳನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸದೇ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಎದೆಯಲ್ಲಿ ಸಣ್ಣ ಪ್ರಮಾಣದ ಅಸ್ವಸ್ಥತೆ ಅಥವಾ ಬಿಗಿತ

ಬೆಳಗಿನ ಜಾವ ಎದ್ದ ತಕ್ಷಣ ಎದೆಯ ಮಧ್ಯಭಾಗ ಅಥವಾ ಎಡಭಾಗದಲ್ಲಿ ತೀವ್ರ ನೋವಿರದೆ ಸಣ್ಣ ಪ್ರಮಾಣದ ಕಿರಿಕಿರಿ, ಭಾರವಾದ ಅನುಭವ ಅಥವಾ ಎದೆ ಬಿಗಿದಂತಾಗುವುದು ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ. ಮುಂಜಾನೆ ರಕ್ತದೊತ್ತಡ ಹೆಚ್ಚಾಗುವುದರಿಂದ ಮತ್ತು ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುವುದರಿಂದ ಈ ರೀತಿಯ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಇದು ಕೆಲವು ನಿಮಿಷಗಳ ಕಾಲ ಇದ್ದು ಮತ್ತೆ ಮಾಯವಾಗಬಹುದು.

ಸಾಕಷ್ಟು ನಿದ್ರೆ ಮಾಡಿದರೂ ನಿರಾಸಕ್ತಿ ಮತ್ತು ಆಯಾಸ

ರಾತ್ರಿ ಸರಿಯಾಗಿ ನಿದ್ರೆ ಮಾಡಿದ್ದರೂ ಸಹ ಬೆಳಗ್ಗೆ ಎದ್ದ ತಕ್ಷಣ ಅತಿಯಾದ ಆಯಾಸ, ದಣವು ಅಥವಾ ಸುಸ್ತು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬಾರದು. ಹೃದಯವು ದೇಹದ ಭಾಗಗಳಿಗೆ ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಈ ರೀತಿಯ ತೀವ್ರ ಆಯಾಸ ಎದುರಾಗುತ್ತದೆ.

ಸಾಮಾನ್ಯ ಕೆಲಸಗಳಿಗೂ ಉಸಿರಾಟದ ತೊಂದರೆ

ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಅಥವಾ ಸಣ್ಣಪುಟ್ಟ ಕೆಲಸಗಳನ್ನು ಮಾಡುವಾಗ ಹಠಾತ್ತಾಗಿ ಉಸಿರಾಟದ ತೊಂದರೆ ಅಥವಾ ಉಸಿರು ಗಟ್ಟಿದಂತೆ ಅನಿಸುವುದು ಹೃದಯದ ವೈಫಲ್ಯದ ಸಂಕೇತವಾಗಿರಬಹುದು. ಎದೆನೋವು ಇಲ್ಲದೆಯೂ ಸಹ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಮಹಿಳೆಯರಲ್ಲಿ ಈ ಲಕ್ಷಣ ಹೆಚ್ಚಾಗಿ ಕಂಡುಬರುತ್ತದೆ.

ಅತಿಯಾದ ಶೀತಲ ಬೆವರು

ಯಾವುದೇ ದೈಹಿಕ ಶ್ರಮ ಇಲ್ಲದಿದ್ದರೂ ಅಥವಾ ತಂಪಾದ ವಾತಾವರಣವಿದ್ದರೂ ಮುಂಜಾನೆ ಎದ್ದಾಗ ದೇಹದಲ್ಲಿ ದಿಢೀರನೆ ಶೀತಲ ಬೆವರು (ಕೋರ್ಡ್ ಸ್ವೆಟ್) ಬರುವುದು ಹೃದಯ ತೀವ್ರ ಒತ್ತಡದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಹೃದಯದ ರಕ್ತ ಪರಿಚಲನೆ ಕಡಿಮೆಯಾದಾಗ ನರಮಂಡಲವು ಜಾಗೃತಗೊಂಡು ಅಡ್ರಿನಾಲಿನ್ ಹಾರ್ಮೋನ್ ಬಿಡುಗಡೆ ಮಾಡುವುದರಿಂದ ಹೀಗಾಗುತ್ತದೆ.

ಅಜೀರ್ಣ, ವಾಕರಿಕೆ ಅಥವಾ ಹೊಟ್ಟೆಯುರಿ

ಬೆಳಗಿನ ಸಮಯದಲ್ಲಿ ಉಂಟಾಗುವ ವಾಕರಿಕೆ, ವಾಂತಿ ಅಥವಾ ಗ್ಯಾಸ್ಟ್ರಿಕ್‌ನಂತೆ ಕಾಣಿಸಿಕೊಳ್ಳುವ ಹೊಟ್ಟೆಯುರಿಯನ್ನು ಅನೇಕರು ಸಾಮಾನ್ಯ ಜೀರ್ಣಕ್ರಿಯೆಯ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಹೃದಯಕ್ಕೆ ರಕ್ತ ಸರಬರಾಜು ಕಡಿಮೆಯಾದಾಗ vagus ನರ ಉತ್ತೇಜನಗೊಂಡು ಹೊಟ್ಟೆಗೆ ಸಂಬಂಧಿಸಿದ ಲಕ್ಷಣಗಳನ್ನು ನೀಡುತ್ತದೆ. ಮಧುಮೇಹಿಗಳು ಮತ್ತು ಹಿರಿಯ ನಾಗರಿಕರಲ್ಲಿ ಈ ಲಕ್ಷಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ದೇಹದ ಇತರ ಭಾಗಗಳಿಗೆ ಹರಡುವ ನೋವು

ಮುಂಜಾನೆ ಎದ್ದಾಗ ಕೇವಲ ಎದೆಯಲ್ಲಷ್ಟೇ ಅಲ್ಲದೆ, ನೋವು ಎಡಗೈ, ಕುತ್ತಿಗೆ, ದವಡೆ, ಹೆಗಲು ಅಥವಾ ಬೆನ್ನಿನ ಭಾಗಕ್ಕೆ ಹರಡುತ್ತಿದ್ದರೆ ಅದನ್ನು ತಕ್ಷಣವೇ ಗಮನಿಸಬೇಕು. ನರಮಂಡಲದ ಮೂಲಕ ಹೃದಯದ ನೋವಿನ ಸಂಕೇತಗಳು ದೇಹದ ಮೇಲ್ಭಾಗದ ಇತರ ಅಂಗಗಳಿಗೂ ಹರಡುತ್ತವೆ.

ಇಂತಹ ಯಾವುದೇ ಲಕ್ಷಣಗಳು ಮುಂಜಾನೆ ಸಮಯದಲ್ಲಿ ಪದೇ ಪದೇ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಪಡುವುದು ಜೀವ ರಕ್ಷಣೆಗೆ ಅತ್ಯಗತ್ಯ.

WhatsApp Group Join Now

Spread the love

Leave a Reply