ಶಿಕ್ಷಣ ಸಾಲಕ್ಕೆ ಪೋಷಕರ ‘ಸಿಬಿಲ್ ಸ್ಕೋರ್’ ಮಾನದಂಡವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

Spread the love

ಅರ್ಹ ವಿದ್ಯಾರ್ಥಿಗಳಿಗೆ ಸಿಗಬೇಕಾದ ಶೈಕ್ಷಣಿಕ ಸೌಲಭ್ಯಗಳಿಗೆ ಪೋಷಕರ ಆರ್ಥಿಕ ಸಂಕಷ್ಟಗಳು ಅಡ್ಡಿಯಾಗಬಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪೋಷಕರ ಸಿಬಿಲ್ ಸ್ಕೋರ್ ಕಡಿಮೆಯಿದೆ ಅಥವಾ ಅವರು ಸಾಲ ಸುಸ್ತಿದಾರರಾಗಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳ ಶಿಕ್ಷಣ ಸಾಲವನ್ನು ತಿರಸ್ಕರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಶೈಕ್ಷಣಿಕ ಸಾಲಗಳನ್ನು ಸಾಮಾನ್ಯ ವಾಣಿಜ್ಯ ಸಾಲಗಳಂತೆ ಪರಿಗಣಿಸಬಾರದು. ಇದು ಮಾನವ ಸಂಪನ್ಮೂಲ ಹಾಗೂ ವಿದ್ಯಾರ್ಥಿಯ ಭವಿಷ್ಯದ ಮೇಲಿನ ಹೂಡಿಕೆಯಾಗಿದೆ. ವಾಣಿಜ್ಯ, ಗೃಹ ಅಥವಾ ವೈಯಕ್ತಿಕ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಸೂಕ್ತ. ಆದರೆ, ಶಿಕ್ಷಣ ಸಾಲದಲ್ಲಿ ನಿಜವಾದ ಸಾಲಗಾರ ವಿದ್ಯಾರ್ಥಿಯೇ ಹೊರತು ಪೋಷಕರಲ್ಲ. ಆತನ ಉದ್ಯೋಗಾವಕಾಶ ಮತ್ತು ಗಳಿಕೆಯ ಸಾಮರ್ಥ್ಯವೇ ಸಾಲಕ್ಕೆ ಮುಖ್ಯ ಭದ್ರತೆಯಾಗಿರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ವಿದ್ಯಾರ್ಥಿ ಸಂಕೇತ್ ರಾಯಪ್ಪ ಎಂಬುವವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗಕ್ಕಾಗಿ 12.56 ಲಕ್ಷ ರೂಪಾಯಿ ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಪೋಷಕರ ಸಿಬಿಲ್ ಸ್ಕೋರ್ ಕಡಿಮೆಯಿದೆ ಎಂಬ ನೆಪವೊಡ್ಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ನ್ಯಾಯಪೀಠವು, ಬ್ಯಾಂಕ್ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿದೆ. ಅಲ್ಲದೆ, ಎರಡು ವಾರಗಳಲ್ಲಿ ಅರ್ಜಿಯನ್ನು ಮರುಪರಿಶೀಲಿಸುವಂತೆ ನಿರ್ದೇಶನ ನೀಡಿದೆ.

ಪೋಷಕರ ಆರ್ಥಿಕ ಹಿನ್ನೆಲೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಸಾಲ ನಿರಾಕರಿಸುವುದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ಕಸಿದುಕೊಂಡಂತೆ. ಇದು ಸಂವಿಧಾನ ನೀಡಿರುವ ಸಮಾನತೆ ಮತ್ತು ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

WhatsApp Group Join Now

Spread the love

Leave a Reply