ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತು: ಎಚ್ಡಿಕೆ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು!

Spread the love

‘ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತಿರುಗೇಟು ನೀಡಿದರು.ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಪ್ರತಿನಿಧಿಗಳಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಭೂಸ್ವಾಧೀನ, ಜುಲೈ 1ರಿಂದ ಜಾರಿಗೆ ಬರಲಿರುವ ಹೊಸ ಯೋಜನೆಯ ಆರ್ಥಿಕ ಹೊರೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.

HDK ಹೇಳಿಕೆಗೆ ತಿರುಗೇಟು

2018ರಲ್ಲಿ ಯಾರು ಯಾರ ಮನೆ ಬಾಗಿಲಿಗೆ ಹೋಗಿದ್ದರು ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಯಾರು ಯಾರ ಮನೆ ಬಾಗಿಲಿಗೆ ಹೋಗಿದ್ದರು ಎಂಬುದು ನನಗೂ ಗೊತ್ತಿದೆ. ಸರ್ಕಾರ ಏಕೆ ಬಿದ್ದಿತ್ತು ಎಂಬುದೂ ಗೊತ್ತಿದೆ” ಎಂದರು. ಆಗ ಸಿದ್ಧಾಂತ ಮತ್ತು ತತ್ವಗಳೆಲ್ಲ ಒಂದೇ ಎಂದು ಹೇಳುತ್ತಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಈಗಿನ ಕೇಂದ್ರ ಸಚಿವರಾಗಿರುವವರು ಹಿಂದೆ ಆರ್‌ಎಸ್‌ಎಸ್ ವಿರುದ್ಧ ದೊಡ್ಡ ಲೇಖನವನ್ನೂ ಬರೆದಿದ್ದರು ಎಂದು ನೆನಪಿಸಿದರು. ಈಗ ಎಲ್ಲವೂ ಬದಲಾಗಿದೆ. ಯಾರ ಮನೆಗೆ ಯಾರು ಹೋಗಿದ್ದರು ಎಂಬ ಸೂಕ್ಷ್ಮ ವಿಚಾರಗಳನ್ನು ಈಗ ಚರ್ಚೆ ಮಾಡುವ ಅಗತ್ಯವಿಲ್ಲ. “ಅವರು ಆತ್ಮಕತೆ ಬರೆಯಬೇಕಾದರೆ ಬರೆಯಲಿ, ನಾವು ನಮ್ಮ ಆತ್ಮಕತೆ ಬರೆಯುತ್ತೇವೆ” ಎಂದು ವ್ಯಂಗ್ಯವಾಡಿದರು.

SIR ಬಗ್ಗೆ ಚುನಾವಣಾ ಆಯೋಗಕ್ಕೆ ಪ್ರಶ್ನೆ

ನಾಳೆಯಿಂದ ಆರಂಭವಾಗಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಸಚಿವ ಸಂಪುಟದಲ್ಲಿ ಹಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದೇವೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿಗೂ ಆಕ್ಷೇಪ ಸಲ್ಲಿಸಲಾಗಿದೆ. ಯಾವ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಜನರ ಹೆಸರನ್ನು ಕೈಬಿಡಲಾಗುತ್ತಿದೆ? ಅದರ ಹಿಂದಿನ ತರ್ಕವೇನು? ಎಂಬ ಪ್ರಶ್ನೆಗಳನ್ನು ಆಯೋಗಕ್ಕೆ ಕೇಳಿದ್ದೇವೆ ಎಂದರು. ಗೊಂದಲಗಳಿದ್ದರೆ ಟ್ರಿಬ್ಯೂನಲ್‌ನಲ್ಲಿ ಪ್ರಶ್ನಿಸಲು ಅವಕಾಶ ನೀಡಬೇಕು. ಕೇವಲ ಸ್ಪೆಲ್ಲಿಂಗ್ ತಪ್ಪಾಗಿದೆ ಎಂಬ ಕಾರಣಕ್ಕೆ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನಮ್ಮ ಆಕ್ಷೇಪಗಳಿಗೆ ಚುನಾವಣಾ ಆಯೋಗದಿಂದ ಇನ್ನೂ ಉತ್ತರ ಬಂದಿಲ್ಲ. ನಾವು SIR ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಉತ್ತಮ ಮತ್ತು ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಬಡವರ ಹಕ್ಕು ಕಸಿದುಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಶ್ಚಿಮ ಬಂಗಾಳದಲ್ಲಿ 89 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಹೇಳಿದರು. ಟ್ರಿಬ್ಯೂನಲ್‌ನಲ್ಲೂ ವಿಚಾರಣೆ ನಡೆಸಲು ಅವಕಾಶ ಇಲ್ಲದಿರುವುದು ಆತಂಕದ ವಿಷಯ. ಈ ವಿಚಾರದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ. ಅಗತ್ಯವಿದ್ದರೆ ಕಾನೂನು ಹೋರಾಟವನ್ನೂ ಮಾಡಬೇಕಾಗುತ್ತದೆ ಎಂದರು.
ಬಿಡದಿ ಭೂಸ್ವಾಧೀನ: ರೈತರಿಗೆ ಬಲವಂತ ಇಲ್ಲ

ಬಿಡದಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಭೂಸ್ವಾಧೀನ ಕಾಯ್ದೆ ಬಹಳ ಸ್ಪಷ್ಟವಾಗಿದೆ. ಯಾರನ್ನೂ ಬಲವಂತವಾಗಿ ಭೂಮಿ ನೀಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ರೈತರು ಸ್ವಯಂಪ್ರೇರಿತವಾಗಿ ಭೂಮಿ ನೀಡಿದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಯಾರೂ ಸ್ವಯಂಪ್ರೇರಿತವಾಗಿ ಭೂಮಿ ನೀಡದಿದ್ದರೆ ಸ್ವಾಧೀನ ಮಾಡುವ ಪ್ರಶ್ನೆಯೇ ಇಲ್ಲ. ಆದರೆ 90ರಿಂದ 95 ಶೇಕಡಾ ಭೂಮಿ ಒಪ್ಪಿಗೆ ಬಂದರೆ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ವಿವರಿಸಿದರು.

ದೇವನಹಳ್ಳಿ ಹಾಗೂ ಚನ್ನರಾಯಪಟ್ಟಣ ಭಾಗದಲ್ಲಿ ಕೃಷಿ ವಲಯ ಘೋಷಿಸಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಕೆಲವರು ಕೈಗಾರಿಕೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. “ರೈತರನ್ನು ಭೂಮಿ ಮಾರುವಂತೆ ಯಾರೂ ಬಲವಂತ ಮಾಡಲಾಗುವುದಿಲ್ಲ. ನಾವು ಅಂತಹ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ವಿರುದ್ಧ ಆರ್ಥಿಕ ಹೊರೆ ಆರೋಪ

ಜುಲೈ 1ರಿಂದ ಜಾರಿಗೆ ಬರಲಿರುವ ಹೊಸ ಯೋಜನೆ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಕಳೆದ ಒಂದು ವರ್ಷದಿಂದ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸುತ್ತಿದ್ದೇನೆ. ಕೇಂದ್ರ ಸರ್ಕಾರ ಏಕಾಏಕಿ 40 ಶೇಕಡಾ ಆರ್ಥಿಕ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹಾಕಿದೆ. ಇದಕ್ಕೆ ಮಧ್ಯಪ್ರದೇಶ, ಬಿಹಾರ ಹಾಗೂ ಆಂಧ್ರಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಅವರ ಮಿತ್ರ ಪಕ್ಷಗಳೂ ಪತ್ರ ಬರೆದು ವಿರೋಧ ವ್ಯಕ್ತಪಡಿಸಿವೆ ಎಂದರು. ಕೃಷಿ ಚಟುವಟಿಕೆ ಗರಿಗೆದರಿರುವ ಸಂದರ್ಭದಲ್ಲಿ 60 ದಿನಗಳ ಕಾಲ ಕಾರ್ಮಿಕರಿಗೆ ಕೆಲಸ ಸಿಗದಂತೆ ಮಾಡುವುದು ಸರಿಯಲ್ಲ. ಇದನ್ನೇ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳೂ ಪ್ರಶ್ನಿಸುತ್ತಿವೆ ಎಂದು ತಿಳಿಸಿದರು.

WhatsApp Group Join Now

Spread the love

Leave a Reply