ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಹಸಿವಿನ ಬೇಗೆಯನ್ನು ತಾಳಲಾರದೆ ಒಂದೇ ಕುಟುಂಬದ ನಾಲ್ವರು ಹತ್ತಿರದ ಹೋಟೆಲ್‌ನಲ್ಲಿ ಕೊನೆಯ ಬಾರಿಗೆ ಊಟ ಸವಿದು, ಪಿರಾವೊಮ್ ಸೇತುವೆಯಿಂದ ಮುವಾಟ್ಟುಪುಳ ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ಕೋತಮಂಗಲಂ ನಿವಾಸಿಗಳಾದ ನಾರಾಯಣನ್, ಅವರ ಅಂಧ ಪತ್ನಿ ಬಿಜಿಮೋಲ್, ಮಕ್ಕಳಾದ ಅನ್ನಾ (6) ಹಾಗೂ ಎರಡು ವರ್ಷದ ಗಂಡು ಮಗು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ಕೊನೆಯ ಮಗು ಅನ್ನಾಳ ಶವ ಪತ್ತೆಯಾಗುವುದರೊಂದಿಗೆ ಇಡೀ ಕುಟುಂಬದ ದುರಂತ ಅಂತ್ಯ ಅಧಿಕೃತಗೊಂಡಿದೆ. ಮೃತ ನಾರಾಯಣನ್ ಕೂಲಿ ಕಾರ್ಮಿಕನಾಗಿದ್ದು, ಪತ್ನಿ ಬಿಜಿಮೋಲ್ ದೃಷ್ಟಿಹೀನರಾಗಿದ್ದರು. ಗುರುವಾಯೂರಿನ ದತ್ತಿ ಸಂಸ್ಥೆಯೊಂದರ ಸಹಾಯದಿಂದ ಇವರ ವಿವಾಹ ನಡೆದಿತ್ತು.
ಆದರೆ, ಸಂಬಂಧಿಕರಿಂದ ದೀರ್ಘಕಾಲ ದೂರವಿದ್ದ ಈ ಕುಟುಂಬ ತೀವ್ರ ಬಡತನದಿಂದಾಗಿ ವಾಸವಿದ್ದ ಮನೆಯ ಬಾಡಿಗೆಯನ್ನೂ ಕಟ್ಟಲಾಗದೆ ಬೀದಿಗೆ ಬಿದ್ದಿತ್ತು. ಬಡತನ ತಾಳಲಾರದೆ ಕಳೆದ ವಾರವಷ್ಟೇ ಈ ದಂಪತಿ ಮಕ್ಕಳೊಂದಿಗೆ ಕೋಥಮಂಗಲಂ ಪೊಲೀಸ್ ಠಾಣೆಗೆ ಬಂದು ತಮಗೆ ಸಾಯಲು ಬಿಡುವಂತೆ ಅಳಲು ತೋಡಿಕೊಂಡಿದ್ದರು. ಆಗ ಕರಗಿದ ಪೊಲೀಸರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ, ಇವರಿಗೆ ಬಾಡಿಗೆ ಮನೆ ಕೊಡಿಸಿ ಮಾನವೀಯತೆ ಮೆರೆದಿದ್ದರು. ಆದರೆ, ಪೊಲೀಸರು ನೆರವು ನೀಡಿದ ಕೆಲವೇ ದಿನಗಳಲ್ಲಿ ಕುಟುಂಬ ಈ ಕಠಿಣ ನಿರ್ಧಾರ ಕೈಗೊಂಡಿರುವುದು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ.ಶುಕ್ರವಾರ ರಾತ್ರಿ ಈ ಭೀಕರ ಘಟನೆ ನಡೆದಿದೆ.
ಕುಟುಂಬವು ಹತ್ತಿರದ ಐಶ್ವರ್ಯಾ ಹೋಟೆಲ್‌ನಲ್ಲಿ ಊಟ ಮುಗಿಸಿ ಹೊರಬರುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ. ಅಲ್ಲಿಂದ ಇವರೆಲ್ಲರೂ ಸೇತುವೆಯ ಕಡೆಗೆ ನಡೆದುಕೊಂಡು ಹೋಗಿ ನದಿಗೆ ಜಿಗಿದಿದ್ದಾರೆ. ಶುಕ್ರವಾರವೇ ಎರಡು ವರ್ಷದ ಮಗುವಿನ ಶವ ತೇಲುತ್ತಿರುವುದನ್ನು ಸ್ಥಳೀಯ ಮೀನುಗಾರರೊಬ್ಬರು ಗಮನಿಸಿದಾಗ ದುರಂತ ಜಗತ್ತಿಗೆ ಗೊತ್ತಾಗಿದೆ. ತದನಂತರ ಬಿಜಿಮೋಲ್, ಶನಿವಾರ ನಾರಾಯಣನ್ ಹಾಗೂ ಭಾನುವಾರ ಮುಂಜಾನೆ ಅಬಕಾರಿ ಕಡವು ಪ್ರದೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರು ವರ್ಷದ ಅನ್ನಾಳ ಶವವನ್ನು ಹೊರತೆಗೆದಿದ್ದಾರೆ. ಸದ್ಯ ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಲಾಮಸ್ಸೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಪಿರಾವೊಮ್ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194 ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಹೋಟೆಲ್‌ನಲ್ಲಿ ಕೊನೆಯ ಊಟ ಮಾಡಿ ನದಿಗೆ ಹಾರಿದ ದಂಪತಿ, ಇಬ್ಬರು ಮಕ್ಕಳು; ಬಡತನ ತಾಳಲಾರದೆ ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಆತ್ಮಹತ್ಯೆ!
WhatsApp Group
Join Now