ಕಾಮದ ಅಮಲೇರಿದ ಹುಚ್ಚುತನಕ್ಕೆ ಸ್ವಂತ ಅಣ್ಣನಂತಿದ್ದ ವ್ಯಕ್ತಿಯನ್ನೇ ತಮ್ಮನೇ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮದ ಇಡ್ತಳ್ಳಿಯಲ್ಲಿ ನಡೆದಿದೆ. ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಪರಮೇಶ್ವರ ಬಾಬು ನಾಯ್ಕ್ (35) ಕೊಲೆಯಾದ ದುರ್ದೈವಿ. ಕೊಲೆ ಮಾಡಿ ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿಯನ್ನು ಪರಮೇಶ್ವರ ತಿಮ್ಮಾ ನಾಯ್ಕ್ (27) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾಗಿದ್ದು, ಒಂದೇ ಸೂರಿನಡಿ ಅಣ್ಣ–ತಮ್ಮಂದಿರಂತೆ ಜೊತೆಯಾಗಿ ಬೆಳೆದಿದ್ದರು.
ಅಕ್ರಮ ಸಂಬಂಧ ತಂದಿಟ್ಟ ಆಪತ್ತು:
ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಪರಮೇಶ್ವರ ತಿಮ್ಮಾ ನಾಯ್ಕ್ ಕಳೆದ ಒಂದೆರಡು ವರ್ಷಗಳಿಂದ ಮೃತನ ಪತ್ನಿಯೊಂದಿಗೆ (ಅತ್ತಿಗೆ) ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ಪತಿ ಪರಮೇಶ್ವರ ಬಾಬು ನಾಯ್ಕ್ ಅವರಿಗೆ ತಿಳಿಯುತ್ತಿದ್ದಂತೆ, ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಮತ್ತು ತಮ್ಮನಿಗೆ ಬುದ್ಧಿವಾದ ಹೇಳಲು ಯತ್ನಿಸಿದ್ದರು. ಇದರಿಂದಾಗಿ ಅಣ್ಣನ ಮೇಲೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದ ಆರೋಪಿ, ಅಣ್ಣನನ್ನು ಮುಗಿಸಲು ಹೊಂಚು ಹಾಕುತ್ತಿದ್ದನು.
ಮಾತನಾಡಬೇಕೆಂದು ಕಾಡಿಗೆ ಕರೆದೊಯ್ದು ಹತ್ಯೆ:
ನಿನ್ನೆ ರಾತ್ರಿ “ಹೊರಗೆ ಸ್ವಲ್ಪ ಮಾತನಾಡಬೇಕು ಬಾ” ಎಂದು ಆರೋಪಿ ತನ್ನ ಅಣ್ಣ ಪರಮೇಶ್ವರ ಬಾಬು ನಾಯ್ಕ್ನನ್ನು ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಸಮೀಪದ ಅರಣ್ಯ ಪ್ರದೇಶದತ್ತ ತೆರಳುತ್ತಿದ್ದಂತೆ, ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದ ಆರೋಪಿ, ಮಾರಕಾಸ್ತ್ರಗಳಿಂದ ಅಣ್ಣನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಪರಮೇಶ್ವರ ಬಾಬು ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಹಂತಕ ತಮ್ಮನಿಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ಕೊಂದ ತಮ್ಮ.! ಉತ್ತರ ಕನ್ನಡದಲ್ಲಿ ಬೆಚ್ಚಿಬೀಳಿಸುವ ಕೊಲೆ
WhatsApp Group
Join Now