ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ 7 ವರ್ಷ ಜೈಲು, 10 ಲಕ್ಷ ರೂ.ವರೆಗೆ ದಂಡ

Spread the love

ಬೆಂಗಳೂರು ನಗರ ಜಿಲ್ಲೆಯಲ್ಲಿ ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಎಚ್ಚರಿಕೆ ನೀಡಿದ್ದಾರೆ.

ಬಕ್ರೀದ್ ಸಂದರ್ಭದಲ್ಲಿ ಒಂಟೆ, ಗೋವುಗಳ ಅಕ್ರಮ ಸಾಗಣೆ ಮತ್ತು ಹತ್ಯೆ ಮಾಡುವುದನ್ನು ತಡೆಗಟ್ಟುವ ಬಗ್ಗೆ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಗೆ ಬರುವ ಸಾಗಣೆ ವಾಹನಗಳ ತಪಾಸಣೆ ನಡೆಸಿ ಗೋವು, ಒಂಟೆಗಳ ಅಕ್ರಮ ಸಾಗಣೆ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ತಪಾಸಣೆ ನಡೆಸಿದ ವಾಹನಗಳು ಅನಧಿಕೃತವಾಗಿ ಗೋವು / ಒಂಟೆಗಳನ್ನು ಸಾಗಿಸುತ್ತಿದ್ದಲ್ಲಿ ಅವುಗಳನ್ನು ವಶಪಡಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದು. ಮಾತ್ರವಲ್ಲದೆ, ವಾಹನದಲ್ಲಿರುವ ಗೋವುಗಳನ್ನು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಗೋಶಾಲೆಗಳಿಗೆ ಅದೇ ವಾಹನದಲ್ಲಿ ಸಾಗಿಸಿ ಸುರಕ್ಷಿತಗೊಳಿಸುವಂತೆ ಸೂಚನೆ ನೀಡಿದರು.

ಒಂಟೆ, ಗೋವುಗಳ ಹತ್ಯೆ ಮಾಡುವುದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರಾಣಿಗಳನ್ನು ಕಳ್ಳ ಸಾಗಣೆ ಮೂಲಕ ಜಿಲ್ಲೆಗೆ ತರುವುದು ಅಪರಾಧವಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಕರಪತ್ರ ಹಾಗೂ ಆಟೊರಿಕ್ಷಾ ಪ್ರಚಾರ ಮೂಲಕ ಅರಿವು ಮೂಡಿಸಬೇಕು ಎಂದು ತಿಳಿಸಿದ ಅವರು, ನಗರದ ಹೊರ ವಲಯಗಳಲ್ಲಿ, ಅಂದರೆ ಮೈಸೂರು ರಸ್ತೆ(ಕುಂಬಳಗೂಡು), ತುಮಕೂರು ರಸ್ತೆ(ಎಕ್ಸಿಬ್ಯೂಷನ್ ಕೇಂದ್ರ) ಮಾಗಡಿ ರಸ್ತೆ(ತಾವರೆಕೆರೆ), ಹೊಸೂರು ರಸ್ತೆ(ಅತ್ತಿಬೆಲೆ), ಹಳೆ ಮದ್ರಾಸ್ ರಸ್ತೆ(ಹೊಸಕೋಟೆ ಹತ್ತಿರ) ಸೇರದ ಒಟ್ಟು 10 ತಪಾಸಣಾ ಕೇಂದ್ರಗಳನ್ನು ಸಾರಿಗೆ ಇಲಾಖೆ ನೇತೃತ್ವದಲ್ಲಿ ನಿರ್ಮಿಸಿ, ಎಲ್ಲಾ ಕೇಂದ್ರಗಳಲ್ಲಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದರು.

ಅಕ್ರಮವಾಗಿ ಒಂಟೆ/ ಗೋಹತ್ಯೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಬೆಂಗಳೂರು ನಗರ ಪಾಲಿಕೆಗಳ ಸಹಾಯವಾಣಿ 1533ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಹಬ್ಬದ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದಂತೆ ಎಚ್ಚರ ವಹಿಸಬೇಕು.

ಪ್ರಾಣಿ ವಧೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯನ್ನು ನಿಯಮಾನುಸಾರ ನಿರ್ವಹಣೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಡಾ. ಪರಮೇಶ್ವರ್ ಹಾಗೂ ಜಿಬಿಎ ಉಪ ನಿರ್ದೇಶಕ ಡಾ. ಚಂದ್ರಯ್ಯ ಉಪಸ್ಥಿತರಿದ್ದರು.

WhatsApp Group Join Now

Spread the love

Leave a Reply