ಸದ್ಯ ರಾಜ್ಯದ ಮನೆಗಳ ಮುಂದೆ ಈ ರೀತಿಯಾದಂತಹ ಒಂದು ಸ್ಟಿಕ್ಕರ್ ರಾರಾಜಿಸ್ತಾ ಇದೆ. ಹಲವರಿಗೆ ಈ ಸ್ಟಿಕ್ಕರ್ ಯಾಕೆ ಅಂಟಿಸಿ ಹೋಗಿದ್ದಾರೆ ಅನ್ನೋದೇ ಗೊತ್ತಿಲ್ಲ. ಇನ್ನು ಕೆಲವರಿಗೆ ಸ್ಟಿಕ್ಕರ್ ಹೇಗೆ ಬಂತು ಅನ್ನೋದೇ ಪ್ರಶ್ನೆ ಆಗಿದೆ. ಇದ್ದಕ್ಕಿದ್ದಂತೆ ಹೇಗೆ ಬಂತು.? ಯಾರು ಅಂಟಿಸಿ ಹೋದ್ರು ಅಂತ ಅಚ್ಚರಿಗೊಂಡಿದ್ದಾರೆ. ಈ ಸ್ಟಿಕ್ಕರ್ ತೆಗೆಯಬೇಡಿ ಅಂತಲೂ ಕೂಡ ಸ್ಟಿಕ್ಕರ್ ಮೇಲೆ ಒಂದು ವಾರ್ನಿಂಗ್ ಹಾಕಿದ್ದಾರೆ. ಇನ್ನು ಸ್ಟಿಕ್ಕರ್ ಅಂಟಿಸಲು ಬಂದಂತಹ ಎಸ್ಕಾಮ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಂತಹ ಘಟನೆಗಳು ಸಹ ಬೆಳಕಿಗೆ ಬಂದಿವೆ. ರಾಜ್ಯದ ಪ್ರತಿ ಮನೆ ಮನೆಗೂ ಈ ರೀತಿಯಾದಂತಹ ಸ್ಟಿಕ್ಕರ್ ಅಂಟಿಸಿ ಸರ್ಕಾರ ಏನು ಮಾಡುವುದಕ್ಕೆ ಹೊರಟಿದೆ.
ಇದು ಸರ್ಕಾರದ ಹೊಸ ಯೋಜನೆ ಅಡಿ ಅಂಟಿಸಲಾಗಿರುವಂತಹ ಸ್ಟಿಕರ್. ರಾಜ್ಯದಲ್ಲಿ ಎರಡನೇ ಬಾರಿಗೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ಏಳರವರೆಗೆ ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೀತಾ ಇದೆ. ಎರಡು ಕೋಟಿಗೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಏಳು ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ದತ್ತಾಂಶ ಸಂಗ್ರಹಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಜ್ಜಾಗಿದೆ. ಅಂದ್ರೆ ಸರ್ಕಾರ ಒಂದು ಹೊಸ ಪ್ಲಾನ್ ರೂಪಿಸಿದೆ. ಇದರಡಿಯಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನ ಮಾಡುವುದಕ್ಕೆ ಹೊರಟಿದೆ. ಇದು ಯಾವ ರೀತಿ ಉಪಯೋಗ ಆಗುತ್ತೆ? ಜನರಿಗೆ ಇದರಿಂದ ಯಾವ ರೀತಿ ಲಾಭ ಇದೆ ಏನು ಅನ್ನೋದನ್ನ ನೋಡೋಣ.
ರಾಜ್ಯದಲ್ಲಿರುವ ಎಲ್ಲಾ ಜನರನ್ನ ಸಮೀಕ್ಷೆಗೆ ಒಳಪಡಿಸುವುದು ಮೊದಲನೇ ಹಂತದಲ್ಲಿ ನಡೆಯುವಂತಹ ಕಾರ್ಯಕ್ರಮ. ಈ ಡೇಟಾವನ್ನ ಸಂಗ್ರಹಿಸಿ ಡಿಸೆಂಬರ್ ಒಳಗಾಗಿ ವರದಿ ಸಲ್ಲಿಸುವಂತೆ ಆಯೋಗಕ್ಕೆ ಸರ್ಕಾರ ಗಡುವು ನೀಡಿದೆ. ಎರಡು ಹಂತಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರ್ತಾ ಇದೆ. ಮೊದಲನೇ ಹಂತದಲ್ಲಿ ಸರ್ಕಾರದ ಪ್ರತಿನಿಧಿಗಳು ಅಥವಾ ಸರ್ಕಾರಿ ಅಧಿಕಾರಿಗಳು ಎಸ್ಕಾಮ್ ಅಧಿಕಾರಿಗಳಾಗಿರಬಹುದು ಅಥವಾ ಸಂಬಂಧಪಟ್ಟವರು ಪ್ರತಿ ಮನೆಗಳಿಗೂ ಹೋಗಿ ಈ ರೀತಿಯಾದಂತಹ ಒಂದು ಸ್ಟಿಕ್ಕರ್ ಅನ್ನ ಅಂಟಿಸಿ ಬರ್ತಾರೆ.
ಎರಡನೇ ಹಂತದಲ್ಲಿ ಶಿಕ್ಷಕರು ಬಂದು ಪ್ರತಿ ಮನೆಯ ಸದಸ್ಯರ ಆ ಕುಟುಂಬದ ಸಾಮಾಜಿಕ ಸ್ಥಿತಿಗತಿ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನ ಕಲೆಹಾಕ್ತಾರೆ. ಮೊದಲನೇ ಹಂತದ ಕಾರ್ಯ ಬಹುತೇಕ ಮುಗಿದಿದೆ ಅಂದ್ರೆ ಮನೆ ಮನೆಗೂ ಸ್ಟಿಕ್ಕರ್ ಅಂಟಿಸಿ ಆಗಿದೆ. ಈ ಹಿನ್ನೆಲೆಯಲ್ಲಿ ಆಯೋಗ ಈಗ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆಗೆ ಸಿದ್ಧತೆಯನ್ನ ನಡೆಸಿದ್ದು, ಮನೆ ಮನೆ ಸಮೀಕ್ಷೆಗೆ ದಿನಗಣನೆ ಶುರುವಾಗಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮುಂದಿನ ದಿನಗಳಲ್ಲಿ ದಸರಾ ಹಬ್ಬದ ರಜೆ ಇದೆ. ಶಾಲೆಗಳಿಗೆ ದಸರಾ ಹಬ್ಬ ರಜೆ ಸಂದರ್ಭದಲ್ಲಿ ಒಟ್ಟು 1.75 ಲಕ್ಷ ಶಿಕ್ಷಕರನ್ನ ಬಳಸಿಕೊಂಡು ಸಮೀಕ್ಷೆ ನಡೆಸುವುದಕ್ಕೆ ಆಯೋಗ ಮುಂದಾಗಿದೆ.
ಅಂದ್ರೆ ದಸರಾ ಸಂದರ್ಭದಲ್ಲಿ ಮಕ್ಕಳಿಗೆ ರಜೆ ಇರಬಹುದು. ಆದರೆ ಶಿಕ್ಷಕರಿಗೆ ರಜೆ ಇಲ್ಲ ಮನೆ ಮನೆಗೂ ಹೋಗಬೇಕು. ಅಲ್ಲಿ ಶೈಕ್ಷಣಿಕ ಸಾಮಾಜಿಕ ಸ್ಥಿತಿಗತೆಯ ಬಗ್ಗೆ ಮಾಹಿತಿಯನ್ನ ಕಲೆ ಹಾಕಬೇಕು. ನಿಮ್ಮ ಮನೆಗೂ ಕೂಡ ಶಿಕ್ಷಕರು ಭೇಟಿ ನೀಡ್ತಾರೆ. ಒಟ್ಟು 60 ಪ್ರಶ್ನೆಗಳನ್ನ ಕೇಳ್ತಾರೆ ಅಂದ್ರೆ ಈ ಸಮೀಕ್ಷೆಯಲ್ಲಿ ಒಟ್ಟು 60 ಪ್ರಶ್ನೆಗಳಿಗೆ ಡೇಟಾವನ್ನ ಸಂಗ್ರಹ ಮಾಡಲಾಗುತ್ತದೆ. ಈ ಸಮೀಕ್ಷೆ ಕಾರ್ಯವನ್ನ ಪಡಿತರ ಚೀಟಿ ಮತ್ತು ಆಧಾರ ಸಂಖ್ಯೆಯನ್ನ ಮೂಲ ದಾಖಲೆಯಾಗಿ ಪರಿಗಣಿಸುವುದಕ್ಕೆ ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತೀರ್ಮಾನ ಮಾಡಿದೆ.
ಶಿಕ್ಷಕರು ಬಂದಂತಹ ಸಂದರ್ಭದಲ್ಲಿ ಪಡಿತರ ಚೀಟಿಯ ಸಂಖ್ಯೆಯನ್ನ ಕೇಳಬಹುದು, ಆಧಾರ ಸಂಖ್ಯೆಯನ್ನ ಕೇಳಬಹುದು. ಇನ್ನು ಸಮೀಕ್ಷೆಗಾಗಿ ಕಾರ್ಯ ನಿರ್ವಹಿಸುವಂತಹ ಈ ಶಿಕ್ಷಕರುಗಳಿಗೆ ಸಂಭಾವನೆ ಕೂಡ ಕೊಡ್ತಾರೆ. ಸಂಭಾವನೆ ರೂಪದಲ್ಲಿ 325 ಕೋಟಿ ರೂಪಾಯಿ ವೆಚ್ಚವಾಗುವಂತಹ ಸಾಧ್ಯತೆ ಇದೆ. ಹಾಗಾದರೆ ಯಾವ ಯಾವ ರೀತಿಯ ಪ್ರಶ್ನೆಗಳನ್ನ ಕೇಳಬಹುದು ಎಂದು ನೀವು ಗೊಂದಲಕ್ಕೆ ಒಳಗಾಗಬೇಕಾದಂತಹ ಅಗತ್ಯ ಇಲ್ಲ. ಯಾಕಂದ್ರೆ ಶಿಕ್ಷಕರು ಬರುವ ಮೊದಲೇ ಈ ಪ್ರಶ್ನಾವಳಿಗಳನ್ನ ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು ಬಂದು ಪ್ರಶ್ನಾವಳಿಗಳ ಪಟ್ಟಿಯನ್ನು ಕೊಡುತ್ತಾರೆ. ಈ ಸಮೀಕ್ಷೆ ನಡೆಯುವುದಕ್ಕೂ ಮೂರು ದಿನ ಮೊದಲು ಪ್ರಶ್ನಾವಳಿಯ ನಮೂನೆಯನ್ನ ಈ ಆಶಾ ಕಾರ್ಯಕರ್ತೆಯರು ಬಂದು ಪ್ರತಿ ಮನೆಗೂ ತಲುಪಿಸುತ್ತಾರೆ.
ಆಶಾ ಕಾರ್ಯಕರ್ತೆಯರಿಗೆ ಈ ಕೆಲಸವನ್ನು ಮಾಡುವುದಕ್ಕೆ ಸುಮಾರು 2000 ರೂಪಾಯಿ ಸಂಭಾವನೆಯನ್ನ ಸರ್ಕಾರ ನೀಡುವುದಕ್ಕೆ ನಿರ್ಧಾರ ಮಾಡಿದೆ. ಈ ಒಟ್ಟು ಪ್ರಾಜೆಕ್ಟ್ ಗೆ ಒಟ್ಟು ಯೋಜನೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸರ್ಕಾರ 420 ಕೋಟಿ ರೂಪಾಯಿನ್ನ ನಿಗದಿಪಡಿಸಿದೆ. ಒಂದು ವೇಳೆ ಅಗತ್ಯ ಬಿದ್ದರೆ ಹೆಚ್ಚು ಬೇಕು ಅಂತ ಹೇಳಿದ್ರೆ ಹೆಚ್ಚಿನ ಅನುದಾನವನ್ನ ಒದಗಿಸುವಂತಹ ಭರವಸೆಯನ್ನು ಕೂಡ ನೀಡಿದೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯ ಕುರಿತಾಗಿ ಒಂದು ಅಧಿಕೃತ ಪತ್ರಿಕಾ ಗೋಷ್ಠಿಯನ್ನ ನಡೆಸಿ ಮಾಹಿತಿಯನ್ನ ನೀಡಿದ್ದಾರೆ.
ಆಯೋಗವು ಸೆಪ್ಟೆಂಬರ್ 22 ರಿಂದ ಆರಂಭಿಸಲಿರುವಂತಹ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಗೃಹಕಚೇರಿ ಕೃಷ್ಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯ ಮೂಲಕವಾಗಿ ಮುಖ್ಯಮಂತ್ರಿಗಳು ಮಾಹಿತಿಯನ್ನ ನೀಡಿದರು. ರಾಜ್ಯದ ಪ್ರತಿಯೊಂದು ಕುಟುಂಬ ಪ್ರತಿಯೊಬ್ಬರು ಸರಿಯಾದ ಮಾಹಿತಿಯನ್ನ ಕೊಡಬೇಕು ಸಮೀಕ್ಷೆಯನ್ನ ಯಶಸ್ವಿಗೊಳಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ಅನೇಕ ಜಾತಿಗಳಿವೆ ವೈರುದ್ಯತೆಯಿಂದ ಕೂಡಿರುವುದರಿಂದ ಈಗಲೂ ಅಸಮಾನತೆ ಇದೆ. ಎಲ್ಲರಿಗೂ ಸಮಾನ ಅವಕಾಶ ಸಾಮಾಜಿಕ ನ್ಯಾಯವನ್ನ ಒದಗಿಸಬೇಕು ಅಂತ ಸಂವಿಧಾನ ಹೇಳುತ್ತದೆ. ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಅಸಮಾನತೆಯನ್ನ ಸಂಪೂರ್ಣವಾಗಿ ತೊಡೆದು ಹಾಕುವುದಕ್ಕೆ ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿ ಹಿಂದೆ ಕಾಂತರಾಜು ಆಯೋಗಕ್ಕೆ ಸಮೀಕ್ಷೆಗೆ ಆದೇಶವನ್ನ ನೀಡಿದ್ದೆ. ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಯ ದತ್ತಾಂಶವಿದ್ದರೆ ಹಿಂದುಳಿದವರ ಸಬಲೀಕರಣಕ್ಕೆ ಕಾರ್ಯಕ್ರಮ ರೂಪಿಸುವುದಕ್ಕೆ ಅನುಕೂಲವಾಗುತ್ತೆ ಅಂತ ಅಭಿಪ್ರಾಯ ಪಟ್ಟಿದ್ದಾರೆ.
ಅಂದ್ರೆ ಯಾಕೆ ಈ ಸಮೀಕ್ಷೆಯನ್ನ ಮಾಡ್ತಿದ್ದಾರೆ ಅಂದ್ರೆ ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೋ ಒಂದು ಯೋಜನೆಯನ್ನ ಜಾರಿಗೆ ತರಬೇಕು ಅಂದುಕೊಂಡಂತಹ ಸಂದರ್ಭದಲ್ಲಿ ಈ ಡೇಟಾವನ್ನ ಬಳಸಿಕೊಳ್ಳುತ್ತದೆ. ಸರಿಯಾದ ವರ್ಗಕ್ಕೆ ಸರಿಯಾದ ಯೋಜನೆ ತಲುಪಬೇಕು ಅನ್ನೋ ಕಾರಣಕ್ಕಾಗಿ ಈ ಸಮೀಕ್ಷೆಯನ್ನ ಮಾಡ್ತಾ ಇರುವಂತಹದ್ದು. ಬಡತನ ಆಗಿರಬಹುದು, ನಿರುದ್ಯೋಗ ಆಗಿರಬಹುದು, ಅನಕ್ಷರತೆ ಆಗಿರಬಹುದು ಇವೆಲ್ಲವನ್ನ ಹೋಗಲಾಡಿಸಬೇಕು ಅಂತ ಹೇಳಿದ್ರೆ ವಿಶೇಷ ಪ್ರಯತ್ನದ ಅಗತ್ಯ ಇದೆ. ಇದನ್ನೇ ನಾವು ಮಾಡ್ತಿರೋದು ಅಂತ ಸಿಎಂ ಹೇಳಿಕೊಂಡಿದ್ದಾರೆ.
ಈಗ ಮನೆ ಮುಂದೆ ಅಂಟಿಸಿರುವಂತಹ ಸ್ಟಿಕ್ಕರ್ ವಿಚಾರಕ್ಕೆ ಬಂದರೆ ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಜಿಯೋ ಟ್ಯಾಗ್ ಮಾಡಿ ಯುಎಚ್ಐಡಿ ಅನ್ನುವ ವಿಶೇಷ ಸಂಖ್ಯೆಯನ್ನ ನಮೂದಿಸಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಒಂದು ಕೋಟಿ 55 ಲಕ್ಷ ಮನೆಗಳಿಗೆ ಯುಎಚ್ಐಡಿ ಸಂಖ್ಯೆಯನ್ನ ಮಾಡಲಾಗಿದೆ. ಒಂದು ವೇಳೆ ವಿದ್ಯುತ್ ಸಂಪರ್ಕ ಇಲ್ಲ ಹಾಗು ಮೀಟರ್ ಇಲ್ಲದಂತಹ ಮನೆಗಳನ್ನು ಕೂಡ ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಇನ್ನು ಈ ಸ್ಟಿಕ್ಕರ್ ಮೇಲೆ ಯುಹೆಚ್ಐಡಿ ಅಂತ ನಮೂದಾಗಿರುವುದನ್ನ ನೀವು ಗಮನಿಸಿರಬಹುದು.
ಯುಹೆಚ್ಐಡಿ ಅಂದರೆ ಯೂನಿಕ್ ಹೌಸ್ ಹೋಲ್ಡ್ ಐಡೆಂಟಿಫಿಕೇಶನ್ ಅಥವಾ ಮನೆ ಗುರುತಿಸುವಿಕೆ ಸಂಖ್ಯೆ ಅಂತ ಅರ್ಥ. ಅಂದ್ರೆ ಇದು ಪ್ರತಿ ಮನೆಗೆ ನೀಡಲಾಗುವಂತಹ ಒಂದು ವಿಶಿಷ್ಟ ಗುರುತಿಸುವಿಕೆ ಸಂಖ್ಯೆಯಾಗಿದೆ. ಈ ಸಂಖ್ಯೆಯನ್ನು ಹೊಂದಿರುವಂತಹ ಸ್ಟಿಕ್ಕರ್ ಅನ್ನ ಆಯೋಗದ ನಿಯೋಗಿಗಳು ಪ್ರತಿ ಮನೆಯ ಮುಂಭಾಗದಲ್ಲಿ ಅಂಟಿಸುತ್ತಾರೆ. ಈ ಪ್ರಕ್ರಿಯೆಯನ್ನ ಹೌಸ್ ಲಿಸ್ಟಿಂಗ್ ಎಕ್ಸರ್ಸೈಜ್ ಅಂತ ಕರೆಯಲಾಗುತ್ತದೆ. ಅಂದ್ರೆ ಮನೆಗಳ ಪಟ್ಟಿ ಮಾಡುವ ಕಾರ್ಯ ಅಂತ. ಈ ಸಂಪೂರ್ಣ ಕಾರ್ಯಾಚರಣೆಯನ್ನ ವಾಸಸ್ಥಳದ ಆಧಾರ್ ಕಾರ್ಡ್ ಹಾಗೆ ರೆಸಿಡೆನ್ಶಿಯಲ್ ಆರ್ ಆರ್ ನಂಬರ್ ಮೂಲ ಡೇಟಾವಾಗಿ ಬಳಸಿಕೊಂಡು ನಡೆಸಲಾಗುತ್ತದೆ. ನಿಯೋಗಿಗಳು ಪ್ರತಿ ಮನೆಗೂ ಭೇಟಿ ನೀಡಿ ವಿವರಗಳನ್ನ ದಾಖಲಿಸಿ ಆ ಮನೆಗೆ ಅಂತಲೇ ಒಂದು ವಿಶಿಷ್ಟ ಐಡಿಯನ್ನ ಉತ್ಪಾದನೆ ಮಾಡ್ತಾರೆ. ಆ ಒಂದು ಐಡಿಯನ್ನ ಈ ಸ್ಟಿಕರ್ ಮೇಲೂ ಕೂಡ ನಮೂದು ಮಾಡಿ ಹೋಗ್ತಾರೆ. ಅಲ್ಲಿಗೆ ಆ ಒಂದು ಮನೆಯ ಕುಟುಂಬ ಸಮೀಕ್ಷೆಯಲ್ಲಿ ಪಾಲ್ಗೊಂಡಿದೆ ಅನ್ನೋದನ್ನ ಸೂಚಿಸುತ್ತದೆ.
ಯಾವ ಯಾವ ವಿವರಗಳನ್ನ ಸಂಗ್ರಹ ಮಾಡ್ತಾರೆ ಅನ್ನೋದನ್ನ ನೋಡೋದಾದರೆ, ಕುಟುಂಬದ ಸದಸ್ಯರ ವಿವರ, ಶೈಕ್ಷಣಿಕ ಅರ್ಹತೆ, ಉದ್ಯೋಗದ ಸ್ವರೂಪ, ಸಾಮಾಜಿಕ ಸ್ಥಿತಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ಡೇಟಾವನ್ನ ಸಂಗ್ರಹ ಮಾಡ್ತಾರೆ. ಈ ರೀತಿ ಸಂಗ್ರಹವಾದಂತಹ ನಿಖರವಾದ ಡೇಟಾವನ್ನ ಭವಿಷ್ಯದಲ್ಲಿ ಸರ್ಕಾರ ಬೇರೆ ಬೇರೆ ಯೋಜನೆಗಳನ್ನ ಜಾರಿಗೆ ತರುವುದಕ್ಕೆ ಬಳಸಿಕೊಳ್ಳುತ್ತೆ. ಅಂದರೆ ಗೃಹ ಯೋಜನೆ ಆಗಿರಬಹುದು, ಉದ್ಯೋಗದ ಯೋಜನೆ, ಶಿಕ್ಷಣ ಸಬ್ಸಿಡಿ ಈ ರೀತಿಯ ಯೋಜನೆಗಳಲ್ಲಿ ಈ ಡೇಟಾವನ್ನ ಬಳಸಿಕೊಳ್ಳುತ್ತದೆ. ಯೋಜನೆಗಳನ್ನ ರೂಪಿಸುವುದಕ್ಕೆ ಮತ್ತು ಅವುಗಳನ್ನ ಸರಿಯಾದ ರೀತಿನಲ್ಲಿ ಜನರಿಗೆ ಸಕಾಲಿಕವಾಗಿ ತಲುಪಿಸುವುದಕ್ಕೆ ಈ ಡೇಟಾ ಮಾರ್ಗದರ್ಶಿ ಆಗುತ್ತದೆ. ಹೀಗಾಗಿ ಸಮೀಕ್ಷೆ ಮಾಡೋದಕ್ಕೆ ಬಂದಂತಹ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಅವರಿಗೆ ನೀವು ಸಹಕರಿಸಬೇಕು. ನಿಖರವಾದ ಮಾಹಿತಿಯನ್ನ ಒದಗಿಸಬೇಕು. ಆ ಮೂಲಕವಾಗಿ ಸರ್ಕಾರಕ್ಕೆ ಸಹಾಯವಾಗಬೇಕು.
ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಈ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತದೆ. 16 ದಿನಗಳ ಕಾಲ ನಡೆಯುತ್ತೆ ಈ ಸಮೀಕ್ಷೆಗೆ ಹಲವು ತಂತ್ರಜ್ಞಾನವನ್ನು ಕೂಡ ಬಳಕೆ ಮಾಡಲಾಗ್ತಾ ಇದೆ. ಒಟ್ಟು 60 ಬೇರೆ ಬೇರೆ ಪ್ರಶ್ನೆಗಳ ಮೂಲಕ ಗಣತಿದಾರರು ಸಮೀಕ್ಷೆಯನ್ನ ಮಾಡ್ತಾರೆ ಮೊಬೈಲ್ ಆಪ್ ಬಳಸಿ ಗಣತಿದಾರರು ಮಾಹಿತಿಯನ್ನ ಎಂಟ್ರಿ ಮಾಡ್ತಾರೆ. ರಾಜ್ಯದ ಸುಮಾರು ಏಳು ಕೋಟಿ ಜನಸಂಖ್ಯೆಯನ್ನ ಈ ಸಮೀಕ್ಷೆಗೆ ಒಳಪಡಿಸಲಾಗ್ತಾ ಇದೆ. 16 ದಿನಗಳಲ್ಲಿ ಸರ್ವೆ ಕಾರ್ಯವನ್ನ ಪೂರ್ಣಗೊಳಿಸಿ ಡಿಸೆಂಬರ್ ವೇಳಿಗೆ ಸರ್ಕಾರಕ್ಕೆ ವರದಿಯನ್ನ ನೀಡಲಾಗುತ್ತದೆ. ಈ ಸಮೀಕ್ಷೆ ನಡೆಸುವುದಕ್ಕೆ ಸಮೀಕ್ಷಾ ಬ್ಲಾಕಿನ ಭೌಗೋಳಿಕ ವ್ಯಾಪ್ತಿಯನ್ನ ಮೊದಲು ನಿರ್ಧರಿಸಬೇಕಾಗುತ್ತದೆ. ಈ ಬಾರಿ ಈ ಸಮೀಕ್ಷೆಯನ್ನ ನಡೆಸುವುದಕ್ಕೆ ಮನೆಗಳಲ್ಲಿ ಎಸ್ಕಾಮ್ ಗಳು ಒದಗಿಸಿರುವಂತಹ ವಿದ್ಯುತ್ ಸಂಪರ್ಕದ ಆರ್ ಆರ್ ಮೀಟರ್ ಗಳ ಆಧಾರದ ಮೇಲೆ ಸಮೀಕ್ಷಾ ಬ್ಲಾಕಿನ ವ್ಯಾಪ್ತಿಯನ್ನ ನಿರ್ಧರಿಸಲಾಗುತ್ತದೆ.
ಸಮೀಕ್ಷಾ ಸಮಯದಲ್ಲಿ ಎಲ್ಲಾ ಮನೆಗಳು ಕುಟುಂಬಗಳು ಮತ್ತು ವ್ಯಕ್ತಿಗಳನ್ನ ಸಮೀಕ್ಷೆಯಲ್ಲಿ ಒಳಪಡಿಸುವುದಕ್ಕೆ ಸಮೀಕ್ಷಾ ಬ್ಲಾಕ್ ನಲ್ಲಿರುವಂತಹ ಪ್ರತಿಯೊಂದು ಮನೆಯನ್ನ ಗುರುತಿಸುವುದರ ಜೊತೆಗೆ ವಸತಿ ರಹಿತ ಕುಟುಂಬಗಳು ವ್ಯಕ್ತಿಗಳು ವಾಸಿಸುತ್ತಾ ಇರುವಂತಹ ಸ್ಥಳ ಪ್ರದೇಶಗಳನ್ನ ಗುರುತಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಈ ಹಿಂದೆ ಅಂದ್ರೆ 2014-15 ರಲ್ಲಿ ಇದೇ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದಂತಹ ಸಂದರ್ಭದಲ್ಲಿ ಮನೆಗಳನ್ನ ಗುರುತಿಸುವುದಕ್ಕಾಗಿ 2011ರ ಜನಗಣತಿ ಬ್ಲಾಕ್ ಗಳನ್ನ ಸಮೀಕ್ಷಾ ಘಟಕವಾಗಿ ಬಳಸಲಾಗಿತ್ತು. ಅಥವಾ ಪರಿಗಣಿಸಲಾಗಿತ್ತು. ಜನಗಣತಿ ಪ್ರಕ್ರಿಯೆಯಲ್ಲಿ ತಯಾರಿಸಿದಂತಹ ಬ್ಲಾಕ್ ಲೇಔಟ್ ನಕ್ಷೆ ಹಾಗೆ ಸಂಕ್ಷಿಪ್ತ ಮನೆಪಟ್ಟಿಗಳ ಆಧಾರದ ಮೇಲೆ ಸಮೀಕ್ಷಕರು ಮನೆ ಮನೆಗೆ ಭೇಟಿ ನೀಡಿ, ರಾಜ್ಯದ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನ ನಿರ್ವಹಿಸಿದ್ರು. ಆದರೆ 2011ರಲ್ಲಿ ತಯಾರಿಸಲಾದಂತಹ ನಕ್ಷೆ ಹಾಗೆ ಮನೆಪಟ್ಟಿಗಳು ಬಹಳ ಹಳೆಯದ್ದು ಅವತ್ತಿನ ವಾಸ್ತವಿಕ ಚಿತ್ರಣವೇ ಬೇರೆ ಈಗಿನ ಚಿತ್ರಣವೇ ಬೇರೆ. ಹೀಗಾಗಿ ಪ್ರಸ್ತುತ ಸಮೀಕ್ಷೆಗಾಗಿ ಒಂದು ವಿನೂತನ ಪದ್ಧತಿಯನ್ನ ಅನ್ವೇಷಿಸಲಾಗಿದೆ. ಈಗಿನ ಸಮೀಕ್ಷೆಗೆ ಇಂಧನ ಇಲಾಖೆ ಹಾಗೆ ಅದರ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಸರಬರಾಜ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕ ನೀಡಲಾಗಿರುವಂತಹ ವಿದ್ಯುತ್ ಮೀಟರ್ಗಳ ಆಧಾರದ ಮೇಲೆ ರಾಜ್ಯಗಳಲ್ಲಿರುವ ಎಲ್ಲಾ ಮನೆಗಳ ಪಟ್ಟಿಯನ್ನ ಸಿದ್ಧಪಡಿಸಲಾಗಿದೆ.
ಸಾಮಾನ್ಯವಾಗಿ ಒಬ್ಬ ಮೀಟರ್ ರೀಡರ್ ಇರುವಂತಹ ಕಾರ್ಯಕ್ಷೇತ್ರದಲ್ಲಿ ಸುಮಾರು 3000 ಮೀಟರ್ಗಳು ಅಂದ್ರೆ ವಿದ್ಯುತ್ ಸಂಪರ್ಕಗಳು ಬರುತ್ತೆ ಅಂದ್ರೆ ಸುಮಾರು 3000 ಮನೆಗಳು ಅಲ್ಲಿರುತ್ತೆ ಅಂತ ಅರ್ಥ ಒಬ್ಬ ಸಮೀಕ್ಷಾದಾರರಿಗೆ ಸುಮಾರು 150 ಮನೆಗಳ ಸಮೀಕ್ಷಾ ಕಾರ್ಯವನ್ನ ನಿರ್ವಹಿಸಿದ್ದಲ್ಲಿ ಅಥವಾ ವಹಿಸಿದ್ದಲ್ಲಿ ಒಬ್ಬ ಮೀಟರ್ ಮ್ಯಾನ್ ಇರುವಂತಹ ಕಾರ್ಯವ್ಯಾಪ್ತಿಯಲ್ಲಿ 20 ಗಣತಿ ಬ್ಲಾಕ್ಗಳನ್ನ ರಚಿಸಬೇಕಾಗುತ್ತದೆ. ಅದರ ಪ್ರಕಾರವಾಗಿ ಪ್ರತಿ ಮನೆಯನ್ನ ಜಿಯೋ ಟ್ಯಾಗ್ ಮಾಡಿ ಗಣತಿ ಬ್ಲಾಕಿನ ವ್ಯಾಪ್ತಿಯಲ್ಲಿ ಒಳಪಡಿಸಲಾಗುತ್ತದೆ. ಸಮೀಕ್ಷಾದಾರರಿಗೆ ಮನೆಗಳನ್ನ ಸುಲಭವಾಗಿ ಗುರುತಿಸಿ ಮನೆ ಭೇಟಿ ನೀಡುವುದಕ್ಕೆ ಅನುಕೂಲವಾಗುವಂತೆ ಸುಮಾರು 150 ಮನೆಗಳಿರುವ ಪ್ರದೇಶವನ್ನ ಒಂದು ಸಮೀಕ್ಷಾ ಬ್ಲಾಕ್ ಆಗಿ ವೈಜ್ಞಾನಿಕವಾಗಿ ರಚಿಸಲಾಗಿದೆ. ಅಂದರೆ ಸಮೀಕ್ಷಾ ಬ್ಲಾಕ್ನಲ್ಲಿರುವ ಪ್ರತಿಯೊಂದು ಮನೆಗೆ ಅಂದ್ರೆ ಪ್ರತಿಯೊಂದು ಕುಟುಂಬಕ್ಕೆ ಒಂದು ವಿಶಿಷ್ಟ ಮನೆ ಸಂಖ್ಯೆ ಅಂದ್ರೆ ಯುಹೆಚ್ಐಡಿ ಸಂಖ್ಯೆಯನ್ನ ಸೃಷ್ಟಿ ಮಾಡಲಾಗುತ್ತದೆ. ಆ ಮೂಲಕವಾಗಿ ಮನೆ ಪಟ್ಟಿಯನ್ನ ಒದಗಿಸಲಾಗುತ್ತದೆ.
ಇದರಿಂದಾಗಿ ಯಾವುದೇ ಮನೆ ತಪ್ಪಿ ಹೋಗದಂತೆ ಮನೆಗಳ ಸಮೀಕ್ಷೆ ಒಂದಕ್ಕಿಂತ ಹೆಚ್ಚು ಬಾರಿ ಆಗದಂತೆ ಪೂರ್ಣ ವ್ಯಾಪ್ತಿಯೊಂದಿಗೆ ನಿಖರವಾಗಿ ಸಮೀಕ್ಷೆ ನಿರ್ವಹಿಸುವುದಕ್ಕೆ ಸಾಧ್ಯವಾಗುತ್ತದೆ. ಇನ್ನು ಇದರಲ್ಲಿ ಸವಾಲಿನ ಕೆಲಸ ಕೂಡ ಇದೆ. ರಾಜ್ಯದಲ್ಲಿ ಅತೀ ದೂರದಲ್ಲಿರುವಂತಹ ಗುಡ್ಡಗಾಡು ಆಗಿರಬಹುದು. ಅರಣ್ಯ ಹಾಗೆ ಅಂತಹ ಕೆಲವೊಂದಷ್ಟು ದುರ್ಗಮ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಇರುವಂತಹ ಮನೆಗಳು ಕೂಡ ಇರುವಂತಹ ಸಾಧ್ಯತೆ ಇದೆ. ಇದಲ್ಲದೆ ನಗರ ಪ್ರದೇಶಗಳ ಒಂದು ಜನನಿಬಿಡ ಜನವಸತಿ ಪ್ರದೇಶದಲ್ಲಿ ಅಂದರೆ ಕೆಲವೊಂದಷ್ಟು ಸ್ಲಮ್ ಪ್ರದೇಶಗಳಲ್ಲಿ ಮನೆಗಳು ಬಹಳ ಇಕ್ಕಟ್ಟಾಗಿರುತ್ತವೆ. ಪ್ರತ್ಯೇಕವಾಗಿ ಆರ್ ಆರ್ ಸಂಖ್ಯೆ ಇಲ್ಲದೆ ಇರುವಂತಹ ಸನ್ನಿವೇಶ ಕೂಡ ಇರಬಹುದು.
ಒಂದು ಮೀಟರ್ ಇರುತ್ತೆ, ಎರಡು ಮೂರು ಮನೆಗಳು ಸಹ ಇರಬಹುದು. ಅಂತಹ ಪ್ರಕರಣಗಳಲ್ಲಿ ಅಂತಹ ಮನೆಗಳನ್ನ ಸಮೀಕ್ಷೆಯಲ್ಲಿ ಒಳಪಡಿಸುವಂತಹ ಅವಕಾಶ ಆಪ್ ನಲ್ಲಿ ಕಲ್ಪಿಸಲಾಗಿರುತ್ತದೆ. ಅಂತಹ ಮನೆಗಳನ್ನ ಸಮೀಕ್ಷಕರು ಜಿಯೋ ಟ್ಯಾಗ್ ಮಾಡಿ ಪರಿಶೀಲನೆಗಾಗಿ ಸಮೀಕ್ಷಾ ಮೇಲಿಚ್ಚಾರಕರಿಗೆ ನೀಡಬೇಕಾಗುತ್ತದೆ. ಒಟ್ಟಾರೆಯಾಗಿ ಸರ್ಕಾರ ವೈಜ್ಞಾನಿಕವಾಗಿ ಸಮೀಕ್ಷೆಯನ್ನ ನಡೆಸುವುದಕ್ಕೆ ಮುಂದಾಗಿದೆ. ಒಟ್ಟಾರೆಯಾಗಿ ಈ ಸಮೀಕ್ಷೆ ಯಶಸ್ವಿಯಾಗಬೇಕು ಅನ್ನೋದು ಸರ್ಕಾರದ ಉದ್ದೇಶ. ಇದಿಷ್ಟು ನಿಮ್ಮ ನಿಮ್ಮ ಮನೆಗಳ ಮುಂದೆ ಅಂಟಿಸಿರುವಂತಹ ಸ್ಟಿಕ್ಕರ್ ಕುರಿತಾಗಿನ ಮಾಹಿತಿ.