ವಿಧ್ಯಾರ್ಥಿ ಬೈಕ್ ಕದ್ದ ಕಳ್ಳನನ್ನು ಅರೆಸ್ಟ್ ಮಾಡಿ ವಿಚಾರಿಸಿದ ವೇಳೆ ಹೊರಬಿತ್ತು ಮತ್ತಷ್ಟು ಕಳ್ಳತನದ ಕಥೆ

Spread the love

ಶಿರ್ವ: ಕಾಲೇಜು ವಿದ್ಯಾರ್ಥಿಯೊಬ್ಬರ ಬೈಕ್ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿರ್ವ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಓರ್ವ ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ ಸುಮಾರು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಓಂ ಕೋಲಾರ ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ : ಡಿ. 5 ರಂದು ವಿದ್ಯಾರ್ಥಿ ಕೌಶಿಕ್ ತನ್ನ ಹೊಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಮಧ್ಯಾಹ್ನ 12:45ರ ಸುಮಾರಿಗೆ ಊಟಕ್ಕಾಗಿ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸ್ಕೂಟರ್ ಪಾರ್ಕ್ ಮಾಡಿದ್ದರು. ಊಟ ಮುಗಿಸಿ ವಾಪಸ್ ಬಂದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುಮಾರು 60,000 ರೂ. ಮೌಲ್ಯದ ಸ್ಕೂಟರ್ ಇದಾಗಿತ್ತು.

ಪೊಲೀಸ್ ಕಾರ್ಯಾಚರಣೆ : ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಉಡುಪಿ, ಮಲ್ಪೆ, ಕಾರ್ಕಳ ಹಾಗೂ ಧರ್ಮಸ್ಥಳ ಸೇರಿದಂತೆ ವಿವಿಧ ಭಾಗಗಳಲ್ಲಿ ಜಾಲ ಬೀಸಿದ್ದ ತಂಡವು ಕೊನೆಗೆ ಓಂ ಕೋಲಾರ ಎಂಬ ಆರೋಪಿಯನ್ನು ಬಂಧಿಸಿದೆ.

ಬಂಧಿತನಿಂದ ಬಯಲಾಯ್ತು ಸರಣಿ ಕಳ್ಳತನ : ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೇವಲ ಶಿರ್ವ ಮಾತ್ರವಲ್ಲದೆ, ಕಾಪು ಮತ್ತು ಬೆಂಗಳೂರು ನಗರದ ವಿವಿಧೆಡೆ ಬೈಕ್ ಕಳವು ಮಾಡಿರುವುದು ಪತ್ತೆಯಾಗಿದೆ. ಬಂಧಿತನಿಂದ ಶಿರ್ವ ಠಾಣೆಗೆ ಸಂಬಂಧಿಸಿದ ಒಂದು ಬೈಕ್ ಹಾಗೂ ಕಾಪು ಮತ್ತು ಬೆಂಗಳೂರಿನಲ್ಲಿ ಕಳವು ಮಾಡಿದ್ದ ಉಳಿದ ನಾಲ್ಕು ಬೈಕ್‌ಗಳು ಸೇರಿದಂತೆ ಒಟ್ಟು 5 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಂಡಕ್ಕೆ ಶ್ಲಾಘನೆ : ಕಾರ್ಕಳ ಎಎಸ್ಪಿ ಡಾ. ಹರ್ಷ ಪ್ರಿಯಂವದಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜಮತ್ ಅಲಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್. ಹಾಗೂ ಸಿಬ್ಬಂದಿಗಳಾದ ಮಂಜುನಾಥ ಅಡಿಗ, ದಯಾನಂದ ಪ್ರಭು, ಅನ್ವರ್ ಅಲಿ, ಸಿದ್ದರಾಯಪ್ಪ, ಮಂಜುನಾಥ ಹೊಸಮನಿ, ಕಿರಣ್, ಶಿವಾನಂದಪ್ಪ ಮತ್ತು ಬಸವರಾಜ್ ಭಾಗವಹಿಸಿದ್ದರು. ಪೊಲೀಸರ ಈ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

WhatsApp Group Join Now

Spread the love

Leave a Reply