ನಾಯಕ ನಟನಾಗಿ ಎಂಟ್ರಿ ಕೊಟ್ಟ ಗಿಲ್ಲಿ ನಟ; ‘ಸೂಪರ್‌ ಹಿಟ್‌’ ಟೀಸರ್‌ ಔಟ್!

Spread the love

ʻಬಿಗ್‌ ಬಾಸ್‌ʼ ಮನೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ʻಕಾಮಿಡಿ ಸ್ಟಾರ್‌ʼ ಗಿಲ್ಲಿ ನಟ ನಾಯಕ ನಟನಾಗಿ ನಟಿಸಿರುವ ʻಸೂಪರ್‌ ಹಿಟ್‌ʼ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಟೀಸರ್‌ ರಿಲೀಸ್‌ ಆಗಿದೆ. ಏನಿದು ಕಥೆ? ಗಿಲ್ಲಿಗೆ ಜೋಡಿ ಯಾರು? ಅನ್ನೋ ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ..

ಕಾಮಿಡಿ ಶೋಗಳಲ್ಲಿ ಪಂಚ್‌ ಡೈಲಾಗ್‌ ಹೊಡೆಯುವ ಮೂಲಕ ಸಖತ್‌ ಫೇಮಸ್‌ ಆಗಿ ಬಂದು, ಇದೀಗ ʻಬಿಗ್ ಬಾಸ್ʼ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ ಗಿಲ್ಲಿ ನಟ. ಈಗಾಗಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ʻದಿ ಡೆವಿಲ್ʼ ಸಿನಿಮಾದಲ್ಲಿಯೂ ಮುಖ್ಯ ಪಾತ್ರವೊಂದರಲ್ಲಿ ಗಿಲ್ಲಿ ನಟಿಸಿದ್ದು, ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಗಿಲ್ಲಿ ನಾಯಕನಾಗಿ ನಟಿಸಿರುವ ʻಸೂಪರ್ ಹಿಟ್ʼ ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತಿದೆ.

ಹೌದು.. ವಿಜಯಾನಂದ್ ನಿರ್ದೇಶನದ ಈ ಸಿನಿಮಾದ ಟೀಸರ್ ಇದೀಗ ರಿಲೀಸ್‌ ಆಗಿದೆ. ಇತ್ತೀಚೆಗೆ ನಡೆದ ಪ್ರೆಸ್‌ಮೀಟ್‌ ಮೂಲಕ ಚಿತ್ರತಂಡ ಒಟ್ಟಾರೆ ಸಿನಿಮಾದ ಬಗೆಗಿನ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ಹೀಗೆ ರಿಲೀಸ್‌ ಆಗಿರುವ ʻಸೂಪರ್ ಹಿಟ್ʼ ಟೀಸರ್ ʻಸು ಫ್ರಂ ಸೋʼ ನಂತರದಲ್ಲಿ ಮತ್ತೊಂದು ಮಟ್ಟದ ಕಾಮಿಡಿಯ ಮೂಲಕ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ.
ರಜತ್ – ಗಿಲ್ಲಿ ನಟ ಮಧ್ಯೆ ವಾಕ್ಸಮರ!

ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗೋದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ʻಸೂಪರ್ ಹಿಟ್ʼ ಅನ್ನೋದು ಸಖತ್‌ ಇಂಟರೆಸ್ಟಿಂಗ್. ‌ʻರನ್ನಿಂಗ್ ಸಕ್ಸಸ್‌ಫುಲಿʼ ಎಂಬ ಟ್ಯಾಗ್ ಲೈನ್ ಕೂಡ ಅದಕ್ಕಿದೆ. ಹೀಗೆ ಟೈಟಲ್ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾದ ಟೈಟಲ್ ಹುಟ್ಟಿದ್ದೇಗೆ ಎಂಬುದರ ಬಗ್ಗೆ ನಿರ್ದೇಶಕ ವಿಜಯಾನಂದ ಹಂಚಿಕೊಂಡಿದ್ದಾರೆ. ಸಾಕಷ್ಟು ಏಳುಬೀಳು ಕಂಡಿದ್ದ ಈ ಸಿನಿಮಾ ನಿರ್ಮಾಪಕರಾದ ಜಿ. ಉಮೇಶ್ ಅವರು ಸೂಪರ್ ಹಿಟ್ ಸಿನಿಮಾವನ್ನ ನಿರ್ಮಾಣ ಮಾಡಯವ ಕನಸು ಹೊಂದಿದ್ದರಂತೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, ಕಥೆಗೂ ಹೊಂದಿಕೆಯಾಗೋದ್ರಿಂದ ಅದನ್ನೇ ಶೀರ್ಷಿಕೆಯಾಗಿಟ್ಟಿರೋದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ʻಸು ಫ್ರಂ ಸೋʼ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲದಿಂದ ಹೊಸ ಹುರುಪು ತುಂಬಿಕೊಂಡಿರುವ ವಿಜಯಾನಂದ್, ಈ ಸಿನಿಮಾಗೂ ಅಂಥದ್ದೇ ಬೆಂಬಲ ಸಿಗುವ ಆಶಯ ಮತ್ತು ಭರವಸೆ ಹೊಂದಿದ್ದಾರೆ. ಅಂದಹಾಗೆ, ಖ್ಯಾತ ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಹೋದರನಾಗಿರುವ ವಿಜಯಾನಂದ್, ಕಮರ್ಷಿಯಲ್ ಧಾಟಿಯಲ್ಲಿ, ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾವನ್ನ ರೂಪಿಸಿದ್ದಾರಂತೆ. ಈಗಾಗಲೇ ಇದರ ಎಲ್ಲ ಕೆಲಸ ಕಾರ್ಯಗಳೂ ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ಮಾಡೋದಷ್ಟೇ ಬಾಕಿ ಉಳಿದಿದೆ ಎಂದು ವಿಜಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರತೀ ಹತ್ತು ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವಂಥಹ ಅಂಶಗಳು, ತಿರುವುಗಳು ಸಿನಿಮಾದಲ್ಲಿವೆಯಂತೆ. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿ ಥ್ರಿಲ್ಲರ್ ಕಾಮಿಡಿ ಜಾನರ್‌ನಲ್ಲಿ ಭಿನ್ನ ಪ್ರಯತ್ನ ನಡೆಸಿರುವ ಸುಳಿವನ್ನೂ ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ. ಈಗಿನ ಯುವ ಸಮುದಾಯಕ್ಕೆ ಹತ್ತಿರವಾಗಿರುವ ಕಥೆ ಹೊಂದಿರುವ ʻಸೂಪರ್ ಹಿಟ್’ ಸಿನಿಮಾದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಕಾಮಿಡಿ ಸ್ಟಾರ್ ಎನಿಸಿಕೊಂಡಿರುವ ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಈ ಸಿನಿಮಾದಲ್ಲಿ ಜೊತೆಯಾಗಿದ್ದಾರೆ.

ʻವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ʼ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಇನ್ನೂ ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಪ್ರಮೋದ್ ಶೆಟ್ಟಿ, ಜೀಜಿ, ಟಿನಿಸ್ ಕೃಷ್ಣ, ಕರಿಸುಬ್ಬು ಸೇರಿದಂತೆ ಮುಂತಾದವರ ತಾರಾಗಣವಿದೆ.

WhatsApp Group Join Now

Spread the love

Leave a Reply