ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಸತ್ತುಹೋಗಿದೆ. ಹದಿನಾರು ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, ಸತ್ತ ಸರ್ಕಾರದ ಹೆಣವನ್ನು ಸಿದ್ದರಾಮಯ್ಯ ಮುಂದೆ ಮತ್ತು ಡಿ.ಕೆ.ಶಿವಕುಮಾರ್ ಹಿಂದೆ ಹೊರುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಕೆಜಿಎಫ್‌ನಲ್ಲಿ ಆಯೋಜಿಸಲಾಗಿದ್ದ ಭೀಮ ನಡಿಗೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ, ಆರ್ಥಿಕ ದಿವಾಳಿತನ ಹಾಗೂ ಗ್ಯಾರಂಟಿ ಯೋಜನೆಗಳ ವೈಫಲ್ಯದ ವಿರುದ್ಧ ಹರಿಹಾಯ್ದರು. ಪ್ರತಾಪ್ ಸಿಂಹ ಅವರ ವಾಗ್ದಾಳಿಯ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.
ಸತ್ತ ಸರ್ಕಾರದ ಹೆಣ ಹೊರುತ್ತಿರುವ ಜೋಡೆತ್ತುಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸತ್ತ ಸರ್ಕಾರದ ಮುಖ್ಯಮಂತ್ರಿ ಎಂದು ಜರೆದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ. ಈ ಸರ್ಕಾರ ಎಂಬುದು ಈಗ ಜೀವವಿಲ್ಲದ ದೇಹವಿದ್ದಂತೆ. ಈ ಹೆಣವನ್ನು ಸಾಗಿಸಲು ಸಿಎಂ ಸಿದ್ದರಾಮಯ್ಯ ಮುಂದಿನ ಭಾಗವನ್ನು ಹೆಗಲ ಮೇಲೆ ಹೊತ್ತಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಹಿಂದಿನಿಂದ ಹೆಗಲು ಕೊಟ್ಟಿದ್ದಾರೆ. ಇವರಿಬ್ಬರು ಎಷ್ಟೇ ಕಷ್ಟಪಟ್ಟು ಹೊತ್ತರೂ ಜೀವವಿಲ್ಲದ ಸರ್ಕಾರದಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. 140 ಸ್ಥಾನಗಳನ್ನು ನೀಡಿದ ತಪ್ಪಿಗೆ ರಾಜ್ಯದ ಜನತೆ ಮತ್ತು ಮೈಮರೆತ ಬಿಜೆಪಿಯವರು ಈಗ ಪಶ್ಚಾತ್ತಾಪ ಪಡುವಂತಾಗಿದೆ ಎಂದು ವ್ಯಂಗ್ಯವಾಡಿದರು.
ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ
ತಮ್ಮನ್ನು ತಾವು ಆರ್ಥಿಕ ತಜ್ಞ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ ಸಿಂಹ, ಸಿದ್ದರಾಮಯ್ಯನವರು 16 ಬಾರಿ ಬಜೆಟ್ ಮಂಡಿಸಿರಬಹುದು. ಆದರೆ ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳುಗೆಡವಿ, ರಾಜ್ಯದ ಮೇಲೆ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿಗಳ ಸಾಲದ ಹೊರೆ ಹೊರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಅವರನ್ನು ಪ್ರಖ್ಯಾತ ಎನ್ನುವ ಬದಲು ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಎನ್ನಬಹುದು ಎಂದು ಲೇವಡಿ ಮಾಡಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿದ್ದರಾಮಯ್ಯ ಏಕವಚನದಲ್ಲಿ ಸಂಬೋಧಿಸಿದ್ದಕ್ಕೆ ಪ್ರತಾಪ್ ಸಿಂಹ ಕೆಂಡಾಮಂಡಲರಾದರು. ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ, ದೇಶದ ಹಣಕಾಸು ಸಚಿವೆಯ ಹೆಸರು ನಿಮಗೆ ತಿಳಿದಿಲ್ಲವೇ? ಅಥವಾ ತಿಳಿದೂ ಉಢಾಪೆಯಿಂದ ವರ್ತಿಸುತ್ತೀರಾ ಎಂದು ಪ್ರಶ್ನಿಸಿದರು.
ಮುಂದುವರಿದು, ಇದೇ ಭಾಷೆಯನ್ನು ನಾವು ನಿಮ್ಮ ಮೇಲೆ ಪ್ರಯೋಗಿಸಿದರೆ ನಿಮಗೆ ಸಹಿಸಲು ಸಾಧ್ಯವೇ? ಯಾವನೋ ಅವನು ಮುಡಾದಲ್ಲಿ ಹೆಂಡತಿ ಹೆಸರಲ್ಲಿ 14 ಸೈಟ್ ಹೊಡೆದವನು ಎಂದು ನಾವು ಏಕವಚನದಲ್ಲಿ ಕರೆದರೆ ನಿಮಗೆ ಎಷ್ಟು ನೋವಾಗಬಹುದು? ಒಬ್ಬ ಮಹಿಳಾ ಸಚಿವೆಯ ಬಗ್ಗೆ ಕನಿಷ್ಠ ಗೌರವ ಇಲ್ಲದೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ? ದ್ವೇಷ ಭಾಷಣದ ವಿರುದ್ಧ ಕಾಯ್ದೆ ತಂದರೆ, ಮೊದಲು ಸಿದ್ದರಾಮಯ್ಯ ಅವರ ವಿರುದ್ಧವೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳು ಕೇವಲ ತಮಟೆ ಸದ್ದು
ಸರ್ಕಾರದ ಪಂಚ ಗ್ಯಾರಂಟಿಗಳನ್ನು ಟೀಕಿಸಿದ ಅವರು, ಎಲ್ಲರಿಗೂ ಫ್ರೀ ಎಂದು ಹೇಳಿ ಜನರಿಗೆ ಟೋಪಿ ಹಾಕಲಾಗುತ್ತಿದೆ. ನಿನ್ನ ಹೆಂಡತಿಗೂ ಫ್ರೀ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಹೊರತು ವಾಸ್ತವದಲ್ಲಿ ಹಾಲಿನ ದರ ಏರಿಕೆಯಾಗಿದೆ, ಬಸ್ ವ್ಯವಸ್ಥೆ ಹಾಳಾಗಿ ಹೋಗಿದೆ, ಮತ್ತು ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕೇವಲ ತಮಟೆ ಹೊಡೆಯುವುದರಲ್ಲೇ ಈ ಸರ್ಕಾರ ಕಾಲ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಗನ ಜೋಳಿಗೆ ತುಂಬಿಸಲು ಅಧಿಕಾರ ದಾಹ
ಸಿಎಂ ಸಿದ್ದರಾಮಯ್ಯ ಇನ್ನೂ ಎರಡುವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಡಾ. ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಹ, ಅಪ್ಪ ಅಧಿಕಾರದಲ್ಲಿದ್ದರೆ ತನ್ನ ಜೋಳಿಗೆ ತುಂಬುತ್ತದೆ ಎಂಬ ಕಾರಣಕ್ಕೆ ಮಗ ಹೀಗೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಮಗನ ಮೂಲಕ ಮತ್ತು ಇತರರ ಮೂಲಕ ಇಂತಹ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಈ ಹಿಂದೆ ಹೀಗೆ ಹೇಳಿಕೆ ಕೊಟ್ಟ ಹಲವರ ಮಂತ್ರಿಗಿರಿ ಹೋಗಿದೆ. ಈಗ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್ ಒಳಜಗಳದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದರು.
16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ: ಸತ್ತ ಸರ್ಕಾರದ ಹೆಣ ಹೊರುತ್ತಿದ್ದಾರೆಂದು ಪ್ರತಾಪ್ ಸಿಂಹ ವಾಗ್ದಾಳಿ
WhatsApp Group
Join Now