ಬೆಂಗಳೂರು ನಗರದ ಶ್ರೀರಾಂಪುರದಲ್ಲಿ ಮಂಗಳಮುಖಿ ಸಮುದಾಯದೊಳಗೆ ಭಯಾನಕ ಹಲ್ಲೆ ಮತ್ತು ದಬ್ಬಾಳಿಕೆಯ ಘಟನೆ ನಡೆದಿದೆ. ಐಶ್ವರ್ಯ ರೆಡ್ಡಿ ಎಂಬಾತ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಮ್ಮ ಸಮುದಾಯದ ಸದಸ್ಯರನ್ನೇ ಟಾರ್ಚರ್ ಮಾಡಿ, ಹಣಕ್ಕಾಗಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೂರುದಾರರ ಪ್ರಕಾರ, ಆರೋಪಿ ಗ್ಯಾಂಗ್ ತಮ್ಮ ಸಮುದಾಯದ ಇತರ ಸದಸ್ಯರನ್ನು ‘ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ’ ಎಂದು ಆಮಿಷ ಒಡ್ಡಿ ಕರೆತಂದು ಹಲ್ಲೆ ನಡೆಸಿದ್ದಾರೆ. ಮೊದಲು 3 ಲಕ್ಷ ರೂಪಾಯಿ ಹಣ ಪಡೆದು, ನಂತರ ಬಿಕ್ಷಾಟನೆ ಮಾಡುವಂತೆ ಒತ್ತಡ ಹೇರಿದ್ದಾರೆ. ದಿನಕ್ಕೆ 10 ಸಾವಿರ ರೂಪಾಯಿ ‘ಕಲೆಕ್ಷನ್’ ತರಬೇಕು ಎಂದು ಟಾರ್ಚರ್ ಮಾಡಿದ್ದಾರೆ. ಹಣ ತರದಿದ್ದವರ ಕೂದಲು ಕತ್ತರಿಸಿ, ತಲೆ ಬೋಳಿಸಿ, ಮರ್ಮಾಂಗಗಳ ಮೇಲೆ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳಿವೆ.
ಆರೋಪಿಗಳ ಪಟ್ಟಿಯಲ್ಲಿ ಐಶ್ವರ್ಯ (ಆಶಿಕ್ ಕುಮಾರ್), ಶಿವಾನಿ (ಸತೀಶ್ ಕುಮಾರ್), ರೂಬಿ, ಮಂಜು ಸೇರಿದಂತೆ ಒಟ್ಟು 8 ಮಂದಿ ಹೆಸರುಗಳಿವೆ. ಈ ಗ್ಯಾಂಗ್ ಸಮುದಾಯದೊಳಗೆ ಅಧಿಕಾರ ಸಾಧಿಸಲು ಇಂತಹ ದಬ್ಬಾಳಿಕೆ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ. ದೂರುದಾರರು ಗ್ಯಾಂಗ್ನ ಹಿಂಸೆಗೆ ಒಳಗಾಗಿ ದಿನನಿತ್ಯ ಭಯದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಟ್ರಾನ್ಸ್ಜೆಂಡರ್ ಸಮುದಾಯ ಈಗಾಗಲೇ ಸಮಾಜದಲ್ಲಿ ತಾರತಮ್ಯ ಮತ್ತು ಹಿಂಸೆಗೆ ಒಳಗಾಗುತ್ತಿದೆ. ಆದರೆ ಸಮುದಾಯದೊಳಗೇ ಇಂತಹ ದಬ್ಬಾಳಿಕೆ ಮತ್ತು ಹಲ್ಲೆಗಳು ನಡೆಯುತ್ತಿರುವುದು ಆಘಾತಕಾರಿ. ಈ ಘಟನೆಯು ಸಮುದಾಯದಲ್ಲಿ ಆಂತರಿಕ ಸಂಘರ್ಷಗಳು ಮತ್ತು ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟಗಳನ್ನು ಬಯಲುಮಾಡಿದೆ. ಹಲವು ಬಾರಿ ಬಿಕ್ಷಾಟನೆ ಮತ್ತು ಇತರ ಉದ್ಯೋಗಗಳ ಮೂಲಕ ಜೀವನ ನಡೆಸುವ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಇಂತಹ ಗ್ಯಾಂಗ್ಗಳ ಒತ್ತಡಕ್ಕೆ ಸಿಲುಕುತ್ತಾರೆ ಎಂಬ ಮಾಹಿತಿ ಲಭ್ಯವಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಮುದಾಯದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಟ್ರಾನ್ಸ್ಜೆಂಡರ್ ಸಂಘಟನೆಗಳು ಈ ಘಟನೆಯನ್ನು ಖಂಡಿಸಿ, ಸರ್ಕಾರದಿಂದ ರಕ್ಷಣೆ ಮತ್ತು ನ್ಯಾಯ ಕೋರಿವೆ.
ಈ ಘಟನೆ ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರು ಎದುರಿಸುತ್ತಿರುವ ಸವಾಲುಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸಮಾಜದಲ್ಲಿ ಸಮಾನತೆ ಮತ್ತು ಗೌರವಕ್ಕಾಗಿ ಹೋರಾಡುತ್ತಿರುವ ಈ ಸಮುದಾಯಕ್ಕೆ ಶಾಂತಿ ಮತ್ತು ಒಗ್ಗಟ್ಟು ಅಗತ್ಯವಿದೆ. ಪೊಲೀಸ್ ತನಿಕೆ ಪೂರ್ಣಗೊಂಡ ನಂತರ ಸತ್ಯಾಂಶಗಳು ಬಯಲಾಗಲಿವೆ.
ಬೆಂಗಳೂರಿನಲ್ಲಿ ಮಂಗಳಮುಖಿ ತಲೆ ಬೋಳಿಸಿ ಮರ್ಮಾಂಗಕ್ಕೆ ಒದ್ದು ಹಲ್ಲೆ
WhatsApp Group
Join Now