ಫೆಬ್ರವರಿ, ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ : ಗುಡ್‌ ನ್ಯೂಸ್‌ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್

Spread the love

2025 ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹ ಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಎಂದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಒಪ್ಪಿಕೊಂಡಿದ್ದು, ಆದಷ್ಟು ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು.

ಇದೀಗ ಗೃಹ ಲಕ್ಷ್ಮಿ ಹಣ ಬಿಡುಗಡೆ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಗೃಹಲಕ್ಷ್ಮಿ ಹಣ ಒಂದೆರಡು ತಿಂಗಳು ತಡವಾಗಿರಬಹುದು. ಹಣ ಸಂಗ್ರಹವಾದ ಬಳಿಕ ಎಲ್ಲವನ್ನು ಜಮೆ ಮಾಡಲಾಗುವುದು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ, ಏಳನೇ ಗ್ಯಾರಂಟಿಯಾಗಿ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಫೆ.13ರಂದು ದೊಡ್ಡ ಕಾರ್ಯಕ್ರಮ ಮಾಡಲು ಚರ್ಚೆ ಮಾಡುತ್ತಿದ್ದು, ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಪ್ರತಿ ತಾಲ್ಲೂಕು, ಪಂಚಾಯಿತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಾಡಬೇಕು ಎಂದು ಕರೆಕೊಟ್ಟರು.

ಇನ್ನು ನೂತನ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ದಿನಾಂಕ ನೀಡಿದ ಬಳಿಕ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ. ಅದೇ ದಿನ ನಿಮ್ಮ ಕ್ಷೇತ್ರಗಳಲ್ಲೂ ಶಂಕುಸ್ಥಾಪನೆ ಮಾಡಬೇಕು. ವರ್ಚುವಲ್ ಮೂಲಕ ಈ ಬೆಂಗಳೂರಿನ ಕಾರ್ಯಕ್ರಮದ ಜೊತೆ ಸಂಪರ್ಕ ಸಾಧಿಸಲಾಗುವುದು. ಈ ಕಾರ್ಯಕ್ರಮಕ್ಕೂ ಮುನ್ನ ನೀವುಗಳು ಕಟ್ಟಡ ನಕ್ಷೆಗೆ ಅನುಮೋದನೆ ಪಡೆದುಕೊಳ್ಳಿ. ಆ ಜಾಗದಲ್ಲಿ ಕಾರ್ಯಕರ್ತರನ್ನು ಸೇರಿಸಿ ಕಾರ್ಯಕ್ರಮ ಮಾಡಿ.

ಪಕ್ಷದ ಕಚೇರಿ ಕಟ್ಟಡ ಒಂದು ಹಂತಕ್ಕೆ ಬಂದ ನಂತರ ಕೆಪಿಸಿಸಿ ಕಡೆಯಿಂದ ಆರ್ಥಿಕ ನೆರವು ನೀಡಲಾಗುವುದು. ಆದಷ್ಟು ಪಕ್ಷದ ನಾಯಕರು, ಶಾಸಕರು, ಜಿಲ್ಲಾ ಸಚಿವರುಗಳಿಂದ ನಿಧಿ ಸಂಗ್ರಹಿಸಿ, ಕಾರ್ಯಕರ್ತರಿಂದ ದೇಣಿಗೆ ಪಡೆದು ಕಚೇರಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು. ಈ ಹಿಂದೆ ಪಕ್ಷದ ಆಸ್ತಿಯಾಗಿ 19 ನಿವೇಷನ, 45 ಸ್ವಂತ ಕಟ್ಟಡ ಇದ್ದವು. ನಾನು ಇದರ ಜವಾಬ್ದಾರಿ ಪಡೆದ ನಂತರ 64 ನಿವೇಷನಗಳ ನೋಂದಣಿಯಾಗಿದೆ. ಇನ್ನು 58 ಆಸ್ತಿಗಳ ನೋಂದಣಿ ಕಾರ್ಯ ಪ್ರಕ್ರಿಯೆ ಹಂತದಲ್ಲಿದೆ. ಒಟ್ಟು 122 ಆಸ್ತಿಗಳಾಗಿದ್ದು, 186 ಆಸ್ತಿಗಳನ್ನು ಮಾಡಬೇಕಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಕೆಲವರು ತಮ್ಮ ಸ್ವಂತ ಆಸ್ತಿಯನ್ನು ಪಕ್ಷಕ್ಕೆ ಬರೆದುಕೊಟ್ಟಿದ್ದಾರೆ. ಕೋನರೆಡ್ಡಿ, ಶರಣಪ್ರಕಾಶ್ ಪಾಟೀಲ್, ಸುಧಾಕರ್, ಉದಯ್, ಸಿರಗುಪ್ಪ ನಾಗರಾಜ್ ಸೇರಿದಂತೆ 22 ಮಂದಿ ತಮ್ಮ ಆಸ್ತಿಯನ್ನು ಪಕ್ಷಕ್ಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಯಾವುದಾದರೂ ಜಾಗ ಇದ್ದರೆ ಹೇಳಿ, ಬಿಡಿಎ ಅಥವಾ ಪಾಲಿಕೆಯಿಂದ ಮಂಜೂರು ಮಾಡಿಸಲಾಗುವುದು. ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ, ಮಾಡಲಿ. ಅವರು ವಿವಿ ಹಾಗೂ ಶಾಲೆಗಳ ಹೆಸರಿನಲ್ಲಿ ಎಷ್ಟು ಎಕರೆ ಮಾಡಿಕೊಂಡಿಲ್ಲವೇ ಚಾಣಕ್ಯ ವಿವಿಗೆ ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯನ್ನು ನೂರಾರು ಎಕರೆ ಕಡಿಮೆ ಬೆಲೆಗೆ ತೆಗೆದುಕೊಂಡಿಲ್ಲವೇ? ನಾವು ಸಣ್ಣ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದೇವೆ. ನಾವು ನಮ್ಮ ಪಾಲಿನ ದೇವಾಲಯಕ್ಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ಇನ್ನು ನಮ್ಮ ರಾಜ್ಯಕ್ಕೆ ಎಸ್‌ಐಆರ್ ಬರುತ್ತಿದೆ. ಅಧಿಕಾರಿಗಳು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಬಿಎಲ್‌ಎ ವಿಚಾರದಲ್ಲಿ ಯಾವುದೇ ಮುಲಾಜಿರುವುದಿಲ್ಲ. ನಮ್ಮ ಭವಿಷ್ಯ ತೀರ್ಮಾನವಾಗುವುದೇ ಎಸ್‌ಐಆರ್ ನಲ್ಲಿ. ಮತದಾರರ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಬಿಎಲ್‌ಎಗಳು ಎಚ್ಚರಿಕೆಯಿಂದ ಇರಬೇಕು. ನೀವು ಹಕ್ಕನ್ನು ಕಾಪಾಡಿಕೊಳ್ಳಬೇಕು. ನಮ್ಮ ರಾಜ್ಯದಿಂದ ವೋಟ್ ಚೋರಿ ಅಭಿಯಾನ ಆರಂಭವಾಗಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಇನ್ನು ವೋಟ್ ಚೋರಿ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ 1.41 ಕೋಟಿ ಸಹಿ ಸಂಗ್ರಹಿಸಿದ ಎಲ್ಲಾ ಜಿಲ್ಲಾಧ್ಯಕ್ಷರು, ಶಾಸಕರು, ಪದಾಧಿಕಾರಿಗಳಿಗೆ ಅಭಿನಂದನೆಗಳು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷ ಉಳಿದರೆ ನಾವು ನೀವುಗಳು, ಪಕ್ಷವಿಲ್ಲವೆಂದರೆ ನಾವುಗಳು ಇರುವುದಿಲ್ಲ ಎಂದು ಎಚ್ಚರಿಸಿದರು.

WhatsApp Group Join Now

Spread the love

Leave a Reply