ಸಾಧಿಸುವ ಮನಸ್ಸಿದ್ದರೆ ಯಾವುದೂ ಕೂಡ ಕಷ್ಟವಲ್ಲ . ಹೌದು ಮುಂಜಾನೆಯಾಗುತ್ತಲೇ ಮನೆ ಬಿಟ್ಟು ಶಾಲೆಗೆ ತೆರಳಿ, ಪುನಃ ರಾತ್ರಿ ವೇಳೆಯೇ ಮನೆ ಸೇರುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಿತ್ಯ 14 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಸಾಗಿ, ಸಮಯ ವ್ಯರ್ಥ ಮಾಡಿಕೊಂಡರೂ SSLC ಪರೀಕ್ಷೆಯಲ್ಲಿ 615 ಅಂಕ ಪಡೆಯುವ ಮೂಲಕ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾಳೆ.
ಶಿರಸಿ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲ್ಕಣಿ ಗ್ರಾಮದ ಮಾನಸ ನಾಗೇಶ ಗೌಡ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 615 ಅಂಕ ಪಡೆದು ಗಮನ ಸೆಳೆದ ವಿದ್ಯಾರ್ಥಿನಿ. ಲಕ್ಷ್ಮಿನರಸಿಂಹ ಮಾಧ್ಯಮಿಕ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿನಿ ಕನ್ನಡ ಮತ್ತು ಹಿಂದಿ ವಿಷಯಕ್ಕೆ ಪೂರ್ಣ ಅಂಕ ಪಡೆದಿದ್ದು, ಇಂಗ್ಲಿಷ್ನಲ್ಲಿ 2 ಅಂಕ, ಗಣಿತದಲ್ಲಿ 2, ಸಮಾಜ ವಿಜ್ಞಾನದಲ್ಲಿ 1 ಅಂಕ ಹಾಗೂ ವಿಜ್ಞಾನದಲ್ಲಿ 5 ಅಂಕ ಕಡಿಮೆ ಬಂದಿದೆ.
ಬಸ್ ಹಾಗೂ ಯಾವುದೇ ವಾಹನ ವ್ಯವಸ್ಥೆ ಇಲ್ಲದ ಗ್ರಾಮದಿಂದ ಸಾಲ್ಕಣಿ ಪ್ರೌಢಶಾಲೆಗೆ ಮಾನಸ ನಿತ್ಯ ಸಹಪಾಠಿಗಳೊಂದಿಗೆ 14 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಳು. ಇದೀಗ ಉತ್ತಮ ಅಂಕಗಳನ್ನು ಪಡೆದು ಎಲ್ಲರೂ ಮೆಚ್ಚುಗೆ ಪಡೆದಿದ್ದಾಳೆ.ಶಾಲೆ ದೂರದಲ್ಲಿರುವ ಕಾರಣ ಬೆಳಗ್ಗೆ 6.30ಕ್ಕೆ ಮನೆಯಿಂದ ಹೊರಡಬೇಕಿತ್ತು. ಸ್ನೇಹಿತರ ಜೊತೆಗೂಡಿ ನಡೆದುಕೊಂಡೇ ತೆರಳುತ್ತಿದ್ದೆವು. ಶಾಲೆ ಮುಗಿಸಿ ಮನೆಗೆ ಬರುವಾಗ ಸಂಜೆ 7:30 ಆಗುತ್ತಿತ್ತು.
ಹೀಗಾಗಿ, ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಅದರಿಂದ ರಾತ್ರಿ 1 ಗಂಟೆವರೆಗೂ ಓದುತ್ತಿದ್ದೆ. ಕೆಲವೊಮ್ಮೆ ಬೆಳಗ್ಗೆ 4 ಗಂಟೆಗೂ ಎದ್ದು ಅಭ್ಯಾಸ ಮಾಡುತ್ತಿದ್ದೆ. ಯಾವುದೇ ಟ್ಯೂಶನ್ ಪಡೆದಿಲ್ಲ. ಮುಂದೆ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಬೇಕು ಅಂದುಕೊಂಡಿದ್ದೇನೆ. ಜಿಲ್ಲಾಧಿಕಾರಿಯಾಗುವ ಗುರಿ ಇದೆ. ಚೆನ್ನಾಗಿ ಓದುತ್ತೇನೆ ಎಂದು ವಿದ್ಯಾರ್ಥಿನಿ ಮಾನಸ ತಮ್ಮ ಕನಸನ್ನು ಹಂಚಿಕೊಂಡರು.
ನಿತ್ಯ 14 ಕಿ.ಮೀ. ನಡೆದು ಶಾಲೆಗೆ ತೆರಳುತ್ತಿದ್ದ ಮಗಳಿಗೆ ಓದಲು ಸಮಯ ಸಿಗುತ್ತಿರಲಿಲ್ಲ. ಮಗಳು ಮುಂದೆ ಸೈನ್ಸ್ ಮಾಡುವುದಾಗಿ ಹೇಳುತ್ತಿದ್ದಾಳೆ. ಕಾಲೇಜಿಗೆ ಶಿರಸಿಗೆ ತೆರಳಬೇಕು. ಆದರೆ ನಿತ್ಯ ಓಡಾಟ ಕಷ್ಟ ಸಾಧ್ಯವಾಗುವ ಕಾರಣ ಹಾಸ್ಟಲ್ ಸಿಕ್ಕರೆ ಅನುಕೂಲವಾಗಲಿದೆ. ಇಲ್ಲವೇ ಬಸ್ ಸೌಕರ್ಯ ಕಲ್ಪಿಸಿದರೆ ಎಲ್ಲ ಮಕ್ಕಳಿಗೂ, ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ಅವರು ಕೇಳಿಕೊಂಡಿದ್ದಾರೆ.

ಬರೋಬ್ಬರಿ 14KM ಕಾಲ್ನಡಿಯಲ್ಲಿ SSLC ಪರೀಕ್ಷೆ ಬರೆದು 615 ಮಾಕ್ಸ್ ಮೂಲಕ ರಾಜ್ಯಕ್ಕೆ ಮಾದರಿಯಾದ ಶಿರಸಿಯ ಹೆಣ್ಣುಮಗಳು
WhatsApp Group
Join Now