ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ’- ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ನಟ ಕಿಶೋರ್‌

Spread the love

ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ನಟ ಕಮಲ್ ಹಾಸನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ಜೋರಾಗಿದೆ. ನಟನ ಈ ಹೇಳಿಕೆಯ ವಿರುದ್ಧ ಕನ್ನಡದ ಕಲಾವಿದರು ಕೂಡ ಸಿಡಿದೆದಿದ್ದು, ಕಮಲ್ ಹಾಸನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ನಡುವೆ ಕನ್ನಡದ ನಟ ಕಿಶೋರ್, ಕಮಲ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಿಶೋರ್, ನನ್ನ ತಾಯಿಯ ಹೊಟ್ಟೆಯಿಂದ ನಾನು ಹುಟ್ಟಿ ಬಂದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅವಮಾನವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು? ತುಂಬಾ ತಿಳಿದಂತಹ ಮನುಷ್ಯ ಏನೂ ಹೇಳಿದ್ದಾರೆ ಎಂದರೆ ಅದಕ್ಕೆ ತರ್ಕ ಇರಲಿದೆ. ಏನೋ ಅರ್ಥ ಇರಬೇಕು ಅದನ್ನು ಪ್ರಶ್ನೆ ಕೇಳಿ ಏನು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಕಮಲ್ ಹಾಸನ್ ಅವರ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ. ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತದೆ. ಹಾಗಂತ ಒಂದು ಭಾಷೆ ಮೇಲೂ- ಕೀಳು ಎಂಬುದಿಲ್ಲ. ಕನ್ನಡವು ಎಲ್ಲಿಂದಲೋ ಹುಟ್ಟಿ ಬಂದಿದೆ ಹಾಗೆ ತಮಿಳು ಸಹ ಎಲ್ಲಿಂದಲೂ ಹುಟ್ಟಿ ಬಂದಿದೆ. ಭಾವುಕರಾಗಿ ಜನರನ್ನು ರೊಚ್ಚಿಗೇಳಿಸಬಾರದು. ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಭಾಷೆಯನ್ನು ಭಾವುಕತೆಯಿಂದ ನೋಡದೆ ಭಾಷೆಯನ್ನ ಭಾಷೆಯಾಗಿ ನೋಡಿ ಎಂದು ಕಿಶೋರ್‌ ಹೇಳಿದ್ದಾರೆ.

ಇನ್ನು ಮಾತು ಮುಂದುವರಿಸಿದ ಅವರು, ಕಮಲ್ ಹಾಸನ್ ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ. ತಮಿಳಿನಿಂದ ಕನ್ನಡ ಬಂದಿದ್ದರೆ ಸರಿ. ಭಾಷೆಗಳ ಬಗ್ಗೆ ಬಹಳಷ್ಟು ಥೇರಿ ಗಳಿವೆ. ಒಂದೊಂದು ಭಾಷೆಯು ಎಲ್ಲಿಂದ ಬಂತು ಎಂದು ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೆ ಇದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದರೆ ಅವಮಾನ ಎಂದು ಯಾಕೆ ಭಾವಿಸಬೇಕು.? ಎಂದು ನಟ ಕಿಶೋರ್‌ ಪ್ರಶ್ನಿಸಿದ್ದಾರೆ.

WhatsApp Group Join Now

Spread the love

Leave a Reply