ಮೈಸೂರು: ನಗರದ ಪಬ್ವೊಂದಕ್ಕೆ ಬೆಂಕಿ ಬಿದ್ದು ಇಬ್ಬರು ಸಜೀವ ದಹನಗೊಂಡಿದ್ದಾರೆ (Mysuru Pub Fire). ಹಾಗೇ, ಏಳುಮಂದಿಗೆ ಮೈಪೂರ್ತಿ ಸುಟ್ಟಗಾಯಗಳಾಗಿವೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂದಹಾಗೇ, ಘಟನೆ ನಡೆದಿದ್ದು, ಮೈಸೂರಿನ ದಟ್ಟಗಳ್ಳಿ 4ನೇ ಹಂತದಲ್ಲಿರುವ ಫಾಕ್ಸ್ ಜೆನ್ ರೆಸ್ಟೋ ಎಂಬ ಹೆಸರಿನ ಪಬ್ನಲ್ಲಿ.
ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ..
ಬೆಂಕಿ ಅವಘಡದಲ್ಲಿ ಮೃತಪಟ್ಟವರು ಡಾರ್ಜೆಲಿಂಗ್ ಮೂಲದ ಸಾಹಿನ್ (26) ಮತ್ತು ನೇಪಾಳದ ಪ್ರಕಾಶ್ (24). ಇನ್ನು ಪಬ್ ಮಾಲೀಕ ನಟ ಪ್ರೀತಂ, ಅವಿನಾಶ್, ಪ್ರಜ್ವಲ್, ಮಹದೇವ್, ರಮೇಶ್, ಸೋನು ಎಂಬುವವರು ಗಾಯಗೊಂಡಿದ್ದಾರೆ. ಇನ್ನು ಅಗ್ನಿಶಾಮಕದಳದವರು ತಕ್ಷಣವೇ ಬಂದು ಕಾರ್ಯಾಚರಣೆ ನಡೆಸಿ, ಸುಮಾರು 15 ಮಂದಿಯನ್ನ ರಕ್ಷಿಸಿದ್ದಾಗಿ ವರದಿಯಾಗಿದೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಒಳಾಂಗಣ ವಿನ್ಯಾಸವೇ ಕಾರಣ..
ಪಬ್ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣವಾದರೂ, ಅದು ವೇಗವಾಗಿ ಹರಡಲು ಪಬ್ನ ಒಳಾಂಗಣ ವಿನ್ಯಾಸವೇ ಕಾರಣ ಎಂದು ಹೇಳಲಾಗಿದೆ. ಈ ಪಬ್ ಒಳಭಾಗದಲ್ಲಿ ವಿನ್ಯಾಸ ಮಾಡಲು ಮರದ ವಸ್ತುಗಳು, ಬಿದಿರಿನ ಪಿಠೋಪಕರಣಗಳು ಮತ್ತು ಒಣಹುಲ್ಲುಗಳು, ಗೋಣಿ ತಾಟುಗಳನ್ನ ಕೂಡ ಬಳಸಲಾಗಿದೆ. ಇವೆಲ್ಲವರೂ ಬೆಂಕಿಯ ತೀವ್ರತೆಯನ್ನ ಜಾಸ್ತಿ ಮಾಡಿವೆ ಎನ್ನಲಾಗಿದೆ.
ಆಫರ್ ಬೇರೆ ಇತ್ತು..
ಈ ಪಬ್ ನಟ ಪ್ರೀತಂ ಅವರು. ಬ್ರಹ್ಮ, ವಿಷ್ಣು, ಮಹೇಶ್ವರ ಸಿನಿಮಾದಲ್ಲಿ ನಟಿಸಿದ್ದರು. ಇದು ಅವರದ್ದೇ ಒಡೆತನದ ಪಬ್ ಆಗಿತ್ತು. ಇನ್ನು ಬೆಂಕಿ ಅವಘಡದ ವೇಳೆ ಪ್ರೀತಂ ಕೂಡ ಅಲ್ಲೇ ಇದ್ದು, ಅವರ ಮುಖಕ್ಕೆಲ್ಲ ಸುಟ್ಟಗಾಯಗಳಾಗಿವೆ. ಅಂದಹಾಗೇ, ಈ ಘಟನೆ ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದಿದೆ. ಬೆಂಕಿ ಅವಘಡವಾದಾಗ 20ಕ್ಕೂ ಹೆಚ್ಚು ಜನ ಪಬ್ನಲ್ಲಿದ್ದರು ಎನ್ನಲಾಗಿದೆ. ಅಡುಗೆ ಮನೆಯಲ್ಲೇ 6 ಮಂದಿ ಇದ್ದರು. ಬೆಂಕಿ ಬೀಳುತ್ತಿದ್ದಂತೆ ಎಲ್ಲರಲ್ಲೂ ಆತಂಕ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಂದಹಾಗೇ, ಇವತ್ತು ಪಬ್ನಲ್ಲಿ ಒಂದು ಆಫರ್ ಬೇರೆ ನಡೆಯುತ್ತಿತ್ತು ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಮಾರಾ ಜನಾಂಗದ ಥೀಮ್ ಆಧಾರಿತ ಈ ರೆಸ್ಟೋ ಪಬ್ನಲ್ಲಿ ಇಂದು ಯಾವುದೇ ಆಹಾರ ಖರೀದಿ ಮಾಡಿದ್ರೂ 175 ರೂಪಾಯಿ ದರ ಘೋಷಿಸಲಾಗಿತ್ತು. ಹೀಗಾಗಿ ಬೆಳಗ್ಗೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರು.
ದಾಖಲೆ ಒದಗಿಸಲು ಹೇಳಿರುವ ಪೊಲೀಸರು..
ಇನ್ನು ಬೆಂಕಿ ದುರಂತದ ಬೆನ್ನಲ್ಲೇ ಮಾಲೀಕ ಪ್ರೀತಂ ಬಳಿ ಪಬ್ಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ಕೂಡಲೆ ಒದಗಿಸುವಂತೆ ಪೊಲೀಸರು ತಿಳಿಸಿದ್ದಾರೆ. ಸದ್ಯ ಅವರೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವುದರಿಂದ ನಂತರ ಅವರು ದಾಖಲೆಗಳನ್ನ ಕೊಡಬೇಕಾಗುತ್ತದೆ. ಪಬ್ ನೆಲ ಮಹಡಿಯಲ್ಲಿ ಇತ್ತು ಮತ್ತು ಗ್ರಾಹಕರಿಗಾಗಿ ಹೆಚ್ಚುವರಿ ಮೇಜುಗಳು ಮತ್ತು ಕುರ್ಚಿಗಳನ್ನು ಮೇಲ್ಛಾವಣಿಯ ಮೇಲೆ ಇರಿಸಲಾಗಿತ್ತು. ಆದರೆ ಮೇಲ್ಛಾವಣಿಯ ಮೇಲೆ ಕೂಡ ಗ್ರಾಹಕರಿಗಾಗಿ ಟೇಬಲ್-ಖುರ್ಚಿ ಇಡಲು ಪಬ್ ಓನರ್ ಅನುಮತಿ ಪಡೆದಿದ್ದಾರಾ..ಇಲ್ಲವಾ ಎಂಬುದು ಖಚಿತತೆ ಇಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಶುರು ಮಾಡಿದ್ದಾರೆ.
ಮೈಸೂರಿನಲ್ಲಿ, ನಟ ಪ್ರೀತಂ ಮಾಲೀಕತ್ವದ ಪಬ್ನಲ್ಲಿ ಬೆಂಕಿ ಅವಘಡ ; ಇಬ್ಬರು ಸಜೀವ ದಹನ
WhatsApp Group
Join Now