ನೀಡಿದ್ದ ಸಾಲದ ಹಣವನ್ನು ಮರಳಿ ನೀಡುವುದಾಗಿ ನಂಬಿಸಿ ಕರೆಸಿಕೊಂಡು, ವೃದ್ಧೆಯೊಬ್ಬರನ್ನು ಭೀಕರವಾಗಿ ಕೊಲೆ (Crime) ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 25 ದಿನಗಳ ಹಿಂದೆಯೇ ಈ ಹತ್ಯೆ ನಡೆದಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ರೆಡ್ಡಮ್ಮ (70) ಕೊಲೆಯಾದ ದುರ್ದೈವಿ. ಹತ್ಯೆಗೈದ ಅದೇ ಗ್ರಾಮದ ತಿಮ್ಮರಾಜು ಮತ್ತು ಮುನಿರಾಜು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಮೇ 17 ರಿಂದಲೇ ನಾಪತ್ತೆಯಾಗಿದ್ದ ವೃದ್ಧೆ
ಮಾಹಿತಿಗಳ ಪ್ರಕಾರ, ವೃದ್ಧೆ ರೆಡ್ಡಮ್ಮ ಅವರು ಕಳೆದ ಮೇ 17 ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದ ಬಳಿಕ ಜೂನ್ 1 ರಂದು ರಾಯಲಪಾಡು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವೃದ್ಧೆಯ ಮಗ ತಮಗೆ ಸಾಲ ನೀಡಿದ್ದ ಮುನಿರಾಜು ಹಾಗೂ ತಿಮ್ಮರಾಜು ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದನು.
ಅರಣ್ಯಪ್ರದೇಶದಲ್ಲಿ ಶವಪತ್ತೆ
ಮೃತರ ಮಗ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಭೀಕರ ಕೊಲೆಯ ರಹಸ್ಯ ಬಯಲಾಗಿದೆ. ಸಾಲದ ಹಣ ಕೊಡುವುದಾಗಿ ವೃದ್ಧೆಯನ್ನು ಕರೆಸಿಕೊಂಡು ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ತಂದು ಬಿಸಾಡಿರುವುದಾಗಿ ಬಾಯಿಬಿಟ್ಟಿದ್ದಾರೆ.
ಸದ್ಯ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ರಾಯಲಪಾಡು ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಲದ ಹಣ ವಾಪಸ್ ಕೊಡುವುದಾಗಿ ನಂಬಿಸಿ ವೃದ್ಧೆಯ ಭೀಕರ ಕೊಲೆ.! ಮೇ 17 ರಿಂದಲೇ ನಾಪತ್ತೆಯಾಗಿದ್ದ ವೃದ್ಧೆ.!
WhatsApp Group
Join Now