ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ತಂದಿದ್ದ ಸುಳ್ಯದ ಪಿಯುಸಿ ಸಾಧಕಿ ಅಭಿಜ್ಞಾ ಭಟ್ ಅನಾರೋಗ್ಯಕ್ಕೆ ಬಲಿ

Spread the love

ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ(2nd PUC) ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಯುವತಿ ಅಭಿಜ್ಞಾ ಭಟ್ (19) ತೀವ್ರ ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದ್ದಾರೆ.

ಮೃತ ಅಭಿಜ್ಞಾ ಭಟ್ 600 ಅಂಕಗಳಿಗೆ 596 ಅಂಕಗಳನ್ನು ಪಡೆದುಕೊಂಡು ಕರ್ನಾಟಕಕ್ಕೆ ನಾಲ್ಕನೇ ರ‍್ಯಾಂಕ್ ತಂದಿದ್ದ ಈ ವಿದ್ಯಾರ್ಥಿನಿಯ ಮರಣವು ಆಕೆಯ ಕುಟುಂಬಸ್ಥರು ಮತ್ತು ಸಹಪಾಠಿಗಳಿಗೆ ಕಣ್ಣೀರು ತರಿಸಿದೆ. ಮೃತ ಅಭಿಜ್ಞಾ ಸುಳ್ಯದ ಪ್ರಸಿದ್ಧ ಇಎನ್‌ಟಿ ವೈದ್ಯರಾದ ಡಾ. ರವಿಶಂಕರ್ ಅವರ ಹಿರಿಯ ಪುತ್ರಿಯಾಗಿದ್ದಾಳೆ.

ಕಳೆದ ಕೆಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಭಿಜ್ಞಾ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಬುಧವಾರದಂದು ಆಕೆಯ ದೈಹಿಕ ಸ್ಥಿತಿ ದಿಡೀರನೆ ಹದಗೆಟ್ಟಿದ್ದರಿಂದ ತಕ್ಷಣವೇ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ವೈದ್ಯರ ಸಕಲ ಪ್ರಯತ್ನಗಳ ಹೊರತಾಗಿಯೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.

ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ (PCMB) ವಿದ್ಯಾರ್ಥಿನಿಯಾಗಿದ್ದ ಅಭಿಜ್ಞಾ ಭಟ್ ಓದಿನಲ್ಲಿ ಸದಾ ಮುಂಚೂಣಿಯಲ್ಲಿದ್ದಳು. ದ್ವಿತೀಯ ಪಿಯು ಫಲಿತಾಂಶ ಬಂದಾಗ ಮೊದಲು ಆಕೆಗೆ 595 ಅಂಕಗಳು ಬಂದಿದ್ದವು. ಆದರೆ ಹಿಂದಿ ಪೇಪರ್ ಮರು ಮೌಲ್ಯಮಾಪನಕ್ಕೆ ಹಾಕಿದ ಬಳಿಕ ಮತ್ತೊಂದು ಅಂಕ ಹೆಚ್ಚಳವಾಗಿ ಒಟ್ಟು 596ಕ್ಕೆ ಏರಿತು. ಈ ಮೂಲಕ ಇಡೀ ಸುಳ್ಯ ತಾಲೂಕಿಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ್ದಳು. ವಿಶೇಷವೆಂದರೆ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್ ಹಾಗೂ ಬಯಾಲಜಿ ಎಂಬ ನಾಲ್ಕೂ ಪ್ರಮುಖ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಳು. ಇದರೊಂದಿಗೆ ಜೆಇಇ ಮೈನ್ಸ್ ಪರೀಕ್ಷೆಯಲ್ಲೂ ಶೇಕಡಾ 94.29 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಳು.

ತನ್ನ ಶಿಸ್ತು ಮತ್ತು ಸರಳ ಸ್ವಭಾವದಿಂದ ಕಾಲೇಜಿನ ಉಪನ್ಯಾಸಕರು ಹಾಗೂ ಗೆಳೆಯರ ನೆಚ್ಚಿನ ಕುವರಿಯಾಗಿದ್ದ ಅಭಿಜ್ಞಾ ಅವರ ಸಾಧನೆಯನ್ನು ಕಂಡು ಇಡೀ ಸುಳ್ಯ ಹೆಮ್ಮೆ ಪಟ್ಟಿತ್ತು. ಉಜ್ವಲ ಭವಿಷ್ಯದ ಕನಸು ಹೊತ್ತು ಸಾಧನೆಯ ಶಿಖರ ಏರಬೇಕಾಗಿದ್ದ ಈ ಅಪ್ರತಿಮ ಪ್ರತಿಭೆ ಇಷ್ಟು ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿರುವುದು ಇಡೀ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಸ್ಥಳೀಯರು ಶೋಕ ವ್ಯಕ್ತಪಡಿಸಿದ್ದಾರೆ.

WhatsApp Group Join Now

Spread the love

Leave a Reply