ಬಿಹಾರ: ಒಂದು ಮಿಸ್ಡ್ ಕಾಲ್ ಇಡೀ ಬದುಕನ್ನೇ ಬದಲಾಯಿಸಬಲ್ಲದೇ? ಬಿಹಾರದ ಜಮುಯಿ ಜಿಲ್ಲೆಯ ಖೈರಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಂತಹುದೇ ಒಂದು ಅಚ್ಚರಿಯ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
36 ವರ್ಷದ, ಐದು ಮಕ್ಕಳ ತಾಯಿಯೊಬ್ಬರು ತನಗಿಂತ 17 ವರ್ಷ ಚಿಕ್ಕವನಾದ 19 ವರ್ಷದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಚಿತ್ರ ಜೋಡಿಯ ಪ್ರೇಮ ಪುರಾಣ ಈಗ ಇಡೀ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಿಸ್ಡ್ ಕಾಲ್ ತಂದ ಮದುವೆ ಯೋಗ!
ಸ್ಥಳೀಯ ಮೂಲಗಳ ಪ್ರಕಾರ, ಪೂರ್ಣಿಯಾ ನಿವಾಸಿಯಾದ ಬಿಂದೂ ದೇವಿ (ಅಲಿಯಾಸ್ ಸೀಮಾ ಪರ್ವೀನ್) ಎಂಬ 36 ವರ್ಷದ ಮಹಿಳೆಗೆ ಸುಮಾರು ಎರಡು ವರ್ಷಗಳ ಹಿಂದೆ ಒಂದು ಮಿಸ್ಡ್ ಕಾಲ್ ಬಂದಿತ್ತು. ಅದು ಖಡೂಯಿ ಬರಿಯಾರ್‌ಪುರ ಗ್ರಾಮದ 19 ವರ್ಷದ ಮಹಾವೀರ್ ಠಾಕೂರ್ ಎಂಬ ಯುವಕನದ್ದಾಗಿತ್ತು.
ಮೊದಲಿಗೆ ಸಾಧಾರಣವಾಗಿ ಶುರುವಾದ ಇವರ ಫೋನ್ ಸಂಭಾಷಣೆ, ದಿನಕಳೆದಂತೆ ಗಂಟೆಗಟ್ಟಲೆ ಮಾತನಾಡುವಷ್ಟರ ಮಟ್ಟಿಗೆ ಬೆಳೆಯಿತು. ಪರಸ್ಪರ ಇಷ್ಟಪಟ್ಟ ಈ ಜೋಡಿ, ಮನೆಯವರಿಗೆ ತಿಳಿಸದೆ ಒಟ್ಟಿಗೆ ಜೀವಿಸಲು ನಿರ್ಧರಿಸಿ ಕೋಲ್ಕತ್ತಾಗೆ ಓಡಿಹೋಗಿದ್ದರು. ಅಲ್ಲಿನ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾಗಿದ್ದು, ತಮ್ಮ ಮದುವೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಮೊದಲ ಪತಿಯಿಂದ ಕಿರುಕುಳದ ಆರೋಪ
ಈ ಘಟನೆಯ ಕುರಿತು ಮಾತನಾಡಿದ ಬಿಂದೂ ದೇವಿ, “ನನ್ನ ಮೊದಲ ಪತಿಯೊಂದಿಗೆ ಕಳೆದ ಜೀವನ ನರಕವಾಗಿತ್ತು. ಆತ ನನಗೆ ತೀವ್ರ ಕಿರುಕುಳ ನೀಡುತ್ತಿದ್ದ. ಆ ಕಷ್ಟದ ಸಮಯದಲ್ಲಿ ಮಹಾವೀರ್ ನನಗೆ ಮಾನಸಿಕ ಬೆಂಬಲ ನೀಡಿದ. ನಾನು ನನ್ನ ಸ್ವಇಚ್ಛೆಯಿಂದಲೇ ಆತನನ್ನು ಮದುವೆಯಾಗಿದ್ದೇನೆ, ನಮ್ಮನ್ನು ದಯವಿಟ್ಟು ದೂರ ಮಾಡಬೇಡಿ” ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ಮೊದಲ ಪತಿ ಮನನ್ ಆಲಂ ಪ್ರತಿಕ್ರಿಯಿಸಿ, “ಆಕೆಗೆ ಐದು ಮಕ್ಕಳಿದ್ದಾರೆ. ಸದ್ಯ ಮಕ್ಕಳೆಲ್ಲರೂ ನನ್ನ ಬಳಿಯೇ ಇದ್ದಾರೆ. ಇನ್ಮುಂದೆ ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ನನ್ನ ಮಕ್ಕಳನ್ನು ಸಾಕಿ ಸಲಹುತ್ತೇನೆ” ಎಂದು ಹೇಳಿದ್ದಾರೆ.
“ಅವಳ ಗತಕಾಲ ನನಗೆ ಬೇಡ” ಎಂದ 19ರ ಯುವಕ!
ಪತ್ನಿಯ ವಯಸ್ಸು ಮತ್ತು ಆಕೆಯ ಐದು ಮಕ್ಕಳ ಬಗ್ಗೆ ಮಾತನಾಡಿದ ಯುವಕ ಮಹಾವೀರ್, “ನನಗೆ ಸೀಮಾಳ ಗತಕಾಲದ ಬಗ್ಗೆ ಯಾವುದೇ ತಕರಾರಿಲ್ಲ. ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ ಮತ್ತು ಒಟ್ಟಿಗೆ ಸಂತೋಷದಿಂದ ಇರಲು ಬಯಸುತ್ತೇವೆ. ನನ್ನ ಸ್ವಂತ ನಿರ್ಧಾರದಿಂದಲೇ ಈ ಮದುವೆ ನಡೆದಿದೆ, ಮುಂದೆಯೂ ಅವಳನ್ನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಧೀಮಂತಿಕೆ ಪ್ರದರ್ಶಿಸಿದ್ದಾನೆ.
ಪೊಲೀಸರು ಹೇಳುವುದೇನು?
ಗ್ರಾಮಸ್ಥರ ದೂರಿನ ಮೇರೆಗೆ ಜೋಡಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಖೈರಾ ಪೊಲೀಸ್ ಅಧಿಕಾರಿ ಮಿಂಟು ಕುಮಾರ್ ಸಿಂಗ್, “ಇಬ್ಬರೂ ವಯಸ್ಕರಾಗಿದ್ದು (Majors), ಕಾನೂನುಬದ್ಧವಾಗಿ ತಮ್ಮಿಷ್ಟದಂತೆ ಜೀವಿಸುವ ಹಕ್ಕನ್ನು ಹೊಂದಿದ್ದಾರೆ. ಯಾರದ್ದೂ ಬಲವಂತವಿಲ್ಲದೆ ಒಟ್ಟಿಗೆ ಇರಲು ಬಯಸಿರುವುದರಿಂದ ವಿಚಾರಣೆಯ ನಂತರ ಅವರನ್ನು ಕಳುಹಿಸಿಕೊಡಲಾಗಿದೆ” ಎಂದು ತಿಳಿಸಿದ್ದಾರೆ.
ಸದ್ಯ ಈ ವಿಚಿತ್ರ ಪ್ರೇಮಕಥೆ ಮತ್ತು ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಮಿಸ್ಡ್ ಕಾಲ್‌ನಲ್ಲಿ ಶುರುವಾದ ಲವ್: 5 ಮಕ್ಕಳ ತಾಯಿಯನ್ನು ಮದುವೆಯಾದ 19ರ ಯುವಕ! ‘ನಮ್ಮನ್ನು ಬೇರೆಮಾಡಬೇಡಿ’ ಎಂದು ಕಣ್ಣೀರಿಟ್ಟ ಜೋಡಿ…
WhatsApp Group
Join Now