ನಾಪತ್ತೆಯಾಗಿದ್ದ ವೃದ್ದೆಯ ಮೃತದೇಹ ಪಾಳು ಕೊಳವೆ ಭಾವಿಯಲ್ಲಿ ಪತ್ತೆ.! ಚಿನ್ನಾಭರಣಕ್ಕಾಗಿ ಕೃತ್ಯವೆಸಗಿದ ಹಂತಕರು ಅಂದರ್

Spread the love

ನಂಜನಗೂಡು : ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ದೆ ಶವವಾಗಿ ಪತ್ತೆಯಾಗಿದ್ದಾರೆ. ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದ ಜಮೀನೊಂದರ ಪಾಳು ಕೊಳವೆಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಚಿನ್ನಾಭರಣಕ್ಕಾಗಿ ಕೊಲೆ ನಡೆದಿದ್ದು, ಕೃತ್ಯವೆಸಗಿದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ನಾಪತ್ತೆಯಾದ ಸ್ಥಳದಲ್ಲಿ ವೃದ್ದೆಯ ಚಪ್ಪಿಲಿಗಳು ಕಂಡುಬಂದಿತ್ತು. ಅಲ್ಲದೆ ಕೃತಕವಾಗಿ ಸೃಷ್ಟಿಸಿದ್ದ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿತ್ತು. ಅನುಮಾನಾಸ್ಪದವಾಗಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಶಿವರುದ್ರಮ್ಮ ಅವರನ್ನ ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದಾಗ ಕಸುವಿನಹಳ್ಳಿ ಜಮೀನಿನಲ್ಲಿ ಪಾಳು ಬಿದ್ದ ಕೊಳವೆ ಬಾವಿಯಲ್ಲಿ ಮೃತದೇಹ ಕಂಡುಬಂದಿದೆ. ಕೊಳವೆಬಾವಿಯಲ್ಲಿ ಮೃತದೇಹವನ್ನ ಹಾಕಿ ಕಲ್ಲು ಮಣ್ಣಿನಿಂದ ಮುಚ್ಚಿದ ದೃಶ್ಯ ಪೊಲೀಸರಿಗೆ ಕಂಡು ಬಂದಿದೆ. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ತನಿಖೆ ಆರಂಭಿಸಿದಾಗ ನಿಗೂಢ ಕೊಲೆ ರಹಸ್ಯ ಬಯಲಾಗಿದೆ. ಮಹದೇವಪ್ಪ ಎಂಬಾತನನ್ನ ಬಂಧಿಸಿದ ಪೊಲೀಸರು ಇನ್ನಿಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತೆ ಶಿವರುದ್ರಮ್ಮ ಸುಮಾರು 60 ರಿಂದ 70 ಗ್ರಾಂ ಚಿನ್ನಾಭರಣ ಧರಿಸಿದ್ದರು. ಪ್ರತಿಸೋಮವಾರ ದೇವಾಲಯಕ್ಕೆ ಪೂಜೆ ಸಲ್ಲಿಸುವ ಉದ್ದೇಶದಿಂದ ಬಿಲ್ವಪತ್ರೆ ತರಲು ಜಮೀನಿಗೆ ಬರುತ್ತಿದ್ದರು.ಬಿಲ್ವಪತ್ರೆ ಮರ ಇದ್ದ ಪಕ್ಕದ ಜಮೀನಿನಲ್ಲಿ ಮಹದೇವಪ್ಪ ಮೈಸೂರು ಮೂಲದವರ ಜಮೀನು ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಶಿವರುದ್ರಮ್ಮ ಧರಿಸಿದ್ದ ಚಿನ್ನಾಭರಣದ ಮೇಲೆ ಮಹದೇವಪ್ಪನ ಕಣ್ಣು ಬಿದ್ದಿತ್ತು. ಚಿನ್ನಾಭರಣ ಲಪಟಾಯಿಸುವ ಉದ್ದೇಶದಿಂದ ಹತ್ತಿರವಾದ ಮಹದೇವಪ್ಪ ಬಿಲ್ವಪತ್ರೆ ಕೀಳಲು ಸಹಾಯ ಮಾಡುವ ನೆಪದಲ್ಲಿ ಪಕ್ಕದಲ್ಲೇ ಇದ್ದ ಪಾಳು ಕೊಳವೆ ಬಾವಿ ಗುಂಡಿಗೆ ತಳ್ಳಿದ್ದಾನೆ. ಪ್ರಜ್ಞೆತಪ್ಪಿದ್ದ ಶಿವರುದ್ರಮ್ಮ ಅವರು ಧರಿಸಿದ್ದ ಚಿನ್ನಾಭರಣ ಲಪಟಾಯಿಸಿ ಕಲ್ಲು‌ಮಣ್ಣು ಸುರಿದು ಮುಚ್ಚಿಹಾಕಿದ್ದಾನೆ.

ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾದ ಶಿವರುದ್ರಮ್ಮ ಅವರ ಜಾಡು ಪತ್ತೆಹಚ್ಚಿದ ಪೊಲೀಸರಿಗೆ ಕೊಲೆ ರಹಸ್ಯ ಬಯಲಾಗಿದೆ. ಚಿನ್ನಾಭರಣ ಆಸೆಗಾಗಿ ವೃದ್ದೆಯನ್ನ ಕೊಂದ ಮಹದೇವಪ್ಪ ಪೊಲೀಸರ ಅತಿಥಿಯಾಗಿದ್ದಾನೆ.ಕೃತ್ಯಕ್ಕೆ ಇನ್ನಿಬ್ಬರು ಸಹಕರಿಸಿರುವ ಶಂಕೆ ಹಿನ್ನಲೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ…

WhatsApp Group Join Now

Spread the love

Leave a Reply