ತ್ರಿಕೋನ ಪ್ರೇಮ ಕಥೆ.! ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂದ ಪ್ರೇಮಿ… ಮುಂದೆ ನಡೆದಿದ್ದು ಶಾಕಿಂಗ್!

Spread the love

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 19 ವರ್ಷದ ಹರೆಯದ ಯುವಕನ ನಾಪತ್ತೆ ಪ್ರಕರಣ ಇದೀಗ ರಕ್ತಸಿಕ್ತ ಅಂತ್ಯ ಕಂಡಿದೆ. ತನ್ನ ಪ್ರೇಯಸಿ ತನಗೆ ಮಾತ್ರ ದಕ್ಕಬೇಕೆಂಬ ಹಠಕ್ಕೆ ಬಿದ್ದ ಮತ್ತೊಬ್ಬ ಪ್ರೇಮಿ ಆಕೆಯ ಸ್ವಂತ ಸಹೋದರನನ್ನೇ ಎತ್ತಿಕಟ್ಟಿ ಭೀಕರ ಹತ್ಯೆ ಮಾಡಿದ್ದಾರೆ.

19 ವರ್ಷದ ವಿಕಾಸ್ ದಳವಾಯಿ ಎಂಬಾತ ತ್ರಿಕೋನ ಪ್ರೇಮಕಥೆಗೆ ಬಲಿಯಾಗಿದ್ದಾನೆ. ವಿಕಾಸ್ ಪ್ರೀತಿಸುತ್ತಿದ್ದ ಯುವತಿಯ ಇನ್ನೊಬ್ಬ ಪ್ರೇಮಿ ಕೃಷ್ಣಾ ಹಾಗೂ ಆಕೆಯ ಸಹೋದರ ರಾಜು, ರವಿ ಮೂವರು ಸೇರಿ ಕೊಲೆ ಮಾಡಿದ್ದಾರೆ.

ಮೃತ ವಿಕಾಸ್ ಮತ್ತು ಕೊಲೆ ಆರೋಪಿ ಕೃಷ್ಣಾ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಮೇ 20 ರಂದು ಗಿರಿಸಾಗರ ಗ್ರಾಮದಲ್ಲಿ ಓಂಕಾರೇಶ್ವರ ದೇವಿ ಜಾತ್ರೆ ಇತ್ತು. ಜಾತ್ರೆಯ ಪ್ರಯುಕ್ತ ಅಂದು ರಾತ್ರಿ ಗ್ರಾಮದಲ್ಲಿ ನಾಟಕ ಏರ್ಪಡಿಸಲಾಗಿತ್ತು. ವಿಕಾಸ್ ದಳವಾಯಿ ರಾತ್ರಿ 10 ಗಂಟೆ ಸುಮಾರಿಗೆ ನಾಟಕ ನೋಡಿ ಬರುವುದಾಗಿ ಮನೆಯಿಂದ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ಆತ ಮನೆಗೆ ಮರಳಿರಲಿಲ್ಲ, ಸಂಬಂಧಿಕರ ಮನೆಗಳಲ್ಲೂ ಪತ್ತೆಯಾಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಬೀಳಗಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ಈ ನಾಪತ್ತೆ ಪ್ರಕರಣಕ್ಕೆ ಭೀಕರ ಟ್ವಿಸ್ಟ್ ಸಿಕ್ಕಿದೆ.

ಗೋಣಿ ಚೀಲದಲ್ಲಿ ಶವ ತುಂಬಿ ಎಸೆದ ಹಂತಕರು

ಆರೋಪಿಗಳಾದ ಕೃಷ್ಣಾ ಕಾಕನೂರ, ಯುವತಿಯ ಸಹೋದರ ರಾಜು ಗುಡದಿನ್ನಿ ಇಬ್ಬರು ಸೇರಿ ನಾಟಕ ನೋಡುತ್ತಿದ್ದ ವಿಕಾಸ್ನನ್ನು ಬೈಕ್ ಮೇಲೆ ಕರೆದುಕೊಂಡು ಊರ ಆಚೆಗಿನ ಜಮೀನಿನಲ್ಲಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವ ಯಾರಿಗೂ ಸಿಗಬಾರದು, ಯಾವುದೇ ಸಾಕ್ಷ್ಯ ಸಿಗಬಾರದು ಅಂತ, ಯುವತಿಯ ಮತ್ತೊಬ್ಬ ಸಹೋದರ ರವಿ ಗುಡದಿನ್ನಿ ಎಂಬುವನ್ನ ಕರೆಸಿಕೊಂಡು ಮೂವರು ಸೇರಿ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಅದು ನೀರಿನ ಮೇಲೆ ತೇಲಿ ಬರದಂತೆ ಚೀಲದೊಳಗೆ ಭಾರವಾದ ಕಲ್ಲುಗಳನ್ನು ಹಾಕಿ, ನಂತರ ಬೀಳಗಿ ತಾಲೂಕಿನ ಅನಗವಾಡಿ ಬಳಿ ಹರಿಯುವ ಘಟಪ್ರಭಾ ನದಿಗೆ ಎಸೆದು ಪರಾರಿಯಾಗಿದ್ದರು. ವಿಕಾಸ್ಗಾಗಿ ಹುಡುಕಾಟದಲ್ಲಿ ಕುಟುಂಬಸ್ತರು ಹಾಗೂ ಪೊಲೀಸರಿಗೆ 7 ದಿನಗಳ ಬಳಿಕ ಮೃತ ವಿಕಾಸ್ ಮೃತದೇಹ ತೇಲಿ ಬಂದಿದ್ದು ಗೊತ್ತಾಗಿ, ಕೊಲೆ ನಡೆದಿರೋದು ಬೆಳಕಿಗೆ ಬಂದಿದೆ.

ಒಂದೇ ಯುವತಿಯನ್ನ ಪ್ರೀತಿಸುತ್ತಿದ್ದ ಇಬ್ಬರು ಯುವಕರು

ಕೊಲೆಯಾದ ವಿಕಾಸ್ ಹಾಗೂ ಆರೋಪಿ ಕೃಷ್ಣಾ ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವತಿ ತನಗೆ ಮಾತ್ರ ದಕ್ಕಬೇಕೆಂದು ಸಂಚು ರೂಪಿಸಿದ ಕೃಷ್ಣಾ, ಯುವತಿಯ ಸಹೋದರ ರಾಜು ಬಳಿ ಹೋಗಿ, “ವಿಕಾಸ್ ನಿನ್ನ ತಂಗಿಯನ್ನ ಪ್ರೀತಿಸುತ್ತಿದ್ದಾನೆ, ಇದರಿಂದ ಊರಲ್ಲಿ ನಿಮಗೆ ಅಪಮಾನ ಆಗ್ತಿಲ್ವಾ?” ಎಂದು ಹೇಳಿ ಆತನನ್ನು ರೊಚ್ಚಿಗೆಬ್ಬಿಸಿದ್ದಾನೆ.

ಕೃಷ್ಣಾ ಮಾತಿಗೆ ಮರುಳಾದ ಸಹೋದರ ರಾಜು, ವಿಕಾಸ್‌ನನ್ನು ಮುಗಿಸಲು ಕೈಜೋಡಿಸಿದ್ದಾನೆ. ಕೊಲೆ ನಡೆದ ಬಳಿಕ ಪ್ರಮುಖ ಆರೋಪಿಗಳಾದ ಕೃಷ್ಣಾ ಮತ್ತು ರಾಜು ತಲೆಮರೆಸಿಕೊಂಡಿದ್ರು. ತನಿಖೆ ಚುರುಕುಗೊಳಿಸಿದ ಬೀಳಗಿ ಪೊಲೀಸರು ಅನುಮಾನದ ಮೇಲೆ ರಾಜುನ ಸಹೋದರ ರವಿ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಹೊರಬಿದ್ದಿದೆ. ಬಳಿಕ ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಪತ್ತೆ ಮಾಡಿದ ಪೊಲೀಸರು ಬಂಧಿಸಿ ಸ್ಥಳ ಮಹಜರು ಮಾಡಿ ಜೈಲಿಗೆ ಅಟ್ಟಿದ್ದಾರೆ.

ಒಟ್ಟಿನಲ್ಲಿ ಹುಡುಗಿ ಹಿಂದೆ ಬಿದ್ದ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಕುಟುಂಬಸ್ಥರು ಮಗನನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಇತ್ತ ಯುವತಿಯ ವ್ಯಾಮೋಹಕ್ಕೆ ಮತ್ತೊಬ್ಬನ ಬಲಿ ಪಡೆದ ಆರೋಪಿ ಜೈಲು ಸೇರಿದ್ದಾನೆ.

WhatsApp Group Join Now

Spread the love

Leave a Reply