ವಿಜಯಪುರ: ಜಿಲ್ಲೆಯ ಹಲವೆಡೆ ಗುರುವಾರ (ಮೇ 14) ತಡರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಗುರುತಿಸಲಾಗಿದೆ.
ತಮ್ಮ ಮನೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಕುಟುಂಬಸ್ಥರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದ ದಿನ ಎಂದಿನಂತೆ ರಾತ್ರಿ ಮನೆಯಲ್ಲಿ ಮಲಗಿದ್ದರು. ಈ ವೇಳೆ ಧಾರಾಕಾರ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಸಮಯದಲ್ಲಿ ಮನೆಯಿಂದ ಆಚೆ ಮಲಗಿದ್ದ ಗುರುನಾಥ ತಾಯಿ ಹಾಗೂ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಸಿಂದಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಲ್ವರ ಮೃತದೇಹಗಳನ್ನ ಹೊರತಗೆದಿದ್ದಾರೆ. ಸ್ಥಳದಲ್ಲಿ ಗುರುನಾಥ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಸ್ಥಳಕ್ಕೆ ಸಚಿವ ಎಂ.ಬಿ ಪಾಟೀಲ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಜೊತೆಗೆ ಸರ್ಕಾರದಿಂದ ಮೃತರಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಅಲ್ಲದೇ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲಿ ಮಳೆರಾಯನ ಅಟ್ಟಹಾಸ: ಸಿಂದಗಿಯಲ್ಲಿ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದುರ್ಮರಣ
WhatsApp Group
Join Now