ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕವಾಗಿ ಇಂಧನ ಬೆಲೆಗಳು ತೀವ್ರ ಏರುತ್ತಿರುವಂತೆಯೇ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹3 ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಯಾಗಿವೆ.
ಇಂಧನ ಬೆಲೆ ಏರಿಕೆಯನ್ನು ಖಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಮೋದಿ ಸರ್ಕಾರ ತನ್ನ ವೈಫಲ್ಯದ ಶಿಕ್ಷೆಯನ್ನು ಸಾಮಾನ್ಯ ಜನರಿಗೆ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಕಿಡಿ ಕಾರಿದ್ದಾರೆ.
‘ಮೋದಿ ಸರ್ಕಾರ ತನ್ನ ವೈಫಲ್ಯದ ಶಿಕ್ಷೆಯನ್ನು ಸಾಮಾನ್ಯ ಜನರಿಗೆ ನೀಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಲೀಟರ್ಗೆ ₹3 ಏರಿಕೆ ಮಾಡಿರುವುದು ವಿಫಲ ವಿದೇಶಾಂಗ ನೀತಿ, ದುರ್ಬಲ ಆರ್ಥಿಕ ನಿರ್ವಹಣೆ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ನಡೆದ ನಿರ್ಲಕ್ಷ್ಯದ ಫಲವಾಗಿದೆ. ಜನರನ್ನು ರಕ್ಷಿಸುವ ಬದಲು, ಕೇಂದ್ರ ಸರ್ಕಾರ ತನ್ನ ವೈಫಲ್ಯಗಳ ಬೆಲೆಯನ್ನು ಜನರಿಂದಲೇ ವಸೂಲು ಮಾಡುತ್ತಿದೆ’ ಎಂದರು.
‘ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ ₹106 ದಾಟಿದೆ. ಡೀಸೆಲ್ ದರ ಸುಮಾರು ₹94ಕ್ಕೆ ತಲುಪಿದೆ. ಈ ದರ ಏರಿಕೆ ಪೆಟ್ರೋಲ್ ಬಂಕ್ಗಳಲ್ಲೇ ನಿಲ್ಲುವುದಿಲ್ಲ. ಸಾರಿಗೆ ವೆಚ್ಚ, ತರಕಾರಿ ಬೆಲೆ, ದಿನಸಿ ಖರ್ಚು, ಹಾಲಿನ ದರ, ಕಟ್ಟಡ ನಿರ್ಮಾಣ ವೆಚ್ಚ, ಶಾಲಾ ವಾಹನ ಶುಲ್ಕ, ಕೃಷಿ ಉತ್ಪಾದನಾ ವೆಚ್ಚ ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಲಿದೆ. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮನೆಯ ಖರ್ಚು ನಿರ್ವಹಿಸುವ ಮಹಿಳೆಯರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸುತ್ತಾರೆ’ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.