ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET UG 2026) ಪರೀಕ್ಷಾ ಅಕ್ರಮದ (Question Paper Leak) ತನಿಖೆ ಚುರುಕುಗೊಂಡಿದ್ದು, ಸಿಬಿಐ (CBI) ಈಗ ಮಹಾರಾಷ್ಟ್ರದ ನಾಸಿಕ್ನಲ್ಲಿ 30 ವರ್ಷದ ಬಿಎಎಂಎಸ್ (BAMS) ವಿದ್ಯಾರ್ಥಿ ಶುಭಂ ಖೈರ್ನಾರ್ನನ್ನು ಅಧಿಕೃತವಾಗಿ ವಶಕ್ಕೆ ಪಡೆದಿದೆ.
ನಾಸಿಕ್ ಜಿಲ್ಲೆಯ ನಂದಗಾಂವ್ ಮೂಲದವನಾದ ಶುಭಂ, ಸದ್ಯ ಕುಟುಂಬದೊಂದಿಗೆ ನಾಸಿಕ್ನ ಇಂದಿರಾನಗರದಲ್ಲಿ ವಾಸವಿದ್ದ. ಆಯುರ್ವೇದ ವೈದ್ಯಕೀಯ (BAMS) ವಿದ್ಯಾರ್ಥಿಯಾದ ಈತ, ಪರೀಕ್ಷಾ ಅಕ್ರಮದ ಜಾಲದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ರಾಜಸ್ಥಾನ ಪೊಲೀಸರು ನೀಡಿದ ಖಚಿತ ಮಾಹಿತಿಯ ಮೇರೆಗೆ ನಾಸಿಕ್ ಕ್ರೈಮ್ ಬ್ರಾಂಚ್ ಈತನನ್ನು ಬಂಧಿಸಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಶುಭಂ ತನ್ನ ಕೂದಲನ್ನು ಕತ್ತರಿಸಿ ವೇಷ ಬದಲಿಸಿದ್ದ. ಮಂಗಳವಾರ ಮಧ್ಯಾಹ್ನ ದೇವಸ್ಥಾನಕ್ಕೆ ಪ್ರಾರ್ಥನೆಗೆಂದು ಹೊರಟಿದ್ದಾಗ ತಾಂತ್ರಿಕ ಕಣ್ಗಾವಲು ಮತ್ತು ಹಳೆಯ ಫೋಟೋಗಳ ಸಹಾಯದಿಂದ ಪೊಲೀಸರು ಈತನನ್ನು ಗುರುತಿಸಿ ಸೆರೆಹಿಡಿದಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಶುಭಂ ಪುಣೆ ಮೂಲದ ವ್ಯಕ್ತಿಯೊಬ್ಬನಿಂದ ‘ಗೆಸ್ ಪೇಪರ್’ (Guess Paper) ಅನ್ನು 10 ಲಕ್ಷ ರೂಪಾಯಿಗೆ ಖರೀದಿಸಿದ್ದ. ನಂತರ ಇದನ್ನು ಹರಿಯಾಣದ ಗ್ರಾಹಕನೊಬ್ಬನಿಗೆ 15 ಲಕ್ಷ ರೂಪಾಯಿಗೆ ಮಾರಿ, ಒಂದೇ ಡೀಲಿನಲ್ಲಿ 5 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದ. ಇಡೀ ವ್ಯವಹಾರವು ಎನ್ಕ್ರಿಪ್ಟ್ ಮಾಡಿದ ಮೆಸೆಂಜರ್ ಆಪ್ ಮೂಲಕ ನಡೆದಿತ್ತು.
ಶುಭಂ ಮಾರಾಟ ಮಾಡಿದ್ದ ಕೈಬರಹದ ಪೇಪರ್ನಲ್ಲಿನ 150 ಪ್ರಶ್ನೆಗಳ ಪೈಕಿ 120 ಪ್ರಶ್ನೆಗಳು (ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ) ಅಸಲಿ ಪರೀಕ್ಷಾ ಪತ್ರಿಕೆಗೆ ನೇರವಾಗಿ ಮ್ಯಾಚ್ ಆಗಿದ್ದವು. ಮೊಬೈಲ್ ಕ್ಯಾಮೆರಾಗಳಲ್ಲಿ ಪೇಪರ್ ಸ್ಕ್ಯಾನ್ ಮಾಡಿದರೆ ಸಿಕ್ಕಿಬೀಳುವ ಭೀತಿಯಿಂದ, ಆರೋಪಿಗಳು ಹೈ-ಡೆಫಿನಿಷನ್ ಪೋರ್ಟಬಲ್ ಸ್ಕ್ಯಾನರ್ಗಳನ್ನು ಬಳಸಿದ್ದರು. ಬಳಿಕ ಟೆಲಿಗ್ರಾಮ್ ಮತ್ತು ವಾಟ್ಸಾಪ್ ಮೂಲಕ ರವಾನಿಸಿದ್ದರು.
ಈ ಇಡೀ ಜಾಲದ ಹಿಂದೆ ಮನೀಶ್ ಯಾದವ್ ಎಂಬಾತ ಮಾಸ್ಟರ್ಮೈಂಡ್ ಆಗಿದ್ದು, ಈತನನ್ನು ಜೈಪುರದಲ್ಲಿ ಬಂಧಿಸಲಾಗಿದೆ. ರಾಜಸ್ಥಾನದ ಸಿಕಾರ್ನಲ್ಲಿರುವ ಕೋಚಿಂಗ್ ಸೆಂಟರ್ಗಳಲ್ಲಿ ಪರೀಕ್ಷೆಗಿಂತ ಒಂದು ತಿಂಗಳು ಮುಂಚಿತವಾಗಿಯೇ ಈ ಪೇಪರ್ ಲಭ್ಯವಿತ್ತು ಎನ್ನಲಾಗಿದೆ. ಮಹಾರಾಷ್ಟ್ರ, ಕೇರಳ, ಹರಿಯಾಣ, ಬಿಹಾರ, ರಾಜಸ್ಥಾನ ಮತ್ತು ಉತ್ತರಾಖಂಡ ಸೇರಿದಂತೆ ಕನಿಷ್ಠ 45 ಮಂದಿಯ ಜಾಲ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ. 22 ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ನೀಟ್ ಪರೀಕ್ಷೆಯನ್ನು ಎನ್ಟಿಎ (NTA) ಈಗಾಗಲೇ ರದ್ದುಗೊಳಿಸಿದ್ದು, ಸಿಬಿಐ ತನಿಖೆ ಮುಂದುವರಿದಿದೆ.
NEET UG: ನೀಟ್ ಪೇಪರ್ 10 ಲಕ್ಷಕ್ಕೆ ಖರೀದಿ, 15 ಲಕ್ಷಕ್ಕೆ ಸೇಲ್! : ಆರೋಪಿ ಶುಭಂ ಅಸಲಿಗೆ ಯಾರು?
WhatsApp Group
Join Now