ಸಂಬಂಧಿಯೊಡನೆ ಪತ್ನಿ ಪರಾರಿ : ಮಕ್ಕಳನ್ನು ಕೊಂದು ಸಾವಿಗೆ ಶರಣಾದ ಪತಿ.! ಇಡೀ ಗ್ರಾಮಸ್ಥರ ಕಣ್ಣಲ್ಲಿ ನೀರು!

Spread the love

ತುಮಕೂರಲ್ಲಿ ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ.
ಪತ್ನಿಯ ಅನೈತಿಕ ಸಂಬಂಧ ಹಾಗೂ ಆಕೆಯ ನಡವಳಿಕೆಯಿಂದ ಮನನೊಂದ ಪತಿಯೊಬ್ಬ ತನ್ನ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ದುರ್ದೈವಿಗಳನ್ನು ಆಲ್ಕೆರೆ ಗ್ರಾಮದ ಶಿವಣ್ಣ (40) ಹಾಗೂ ಆತನ ಮಕ್ಕಳಾದ ಜೀವನ್ (11) ಮತ್ತು ಪ್ರಾಣೇಶ್ (6) ಎಂದು ಗುರುತಿಸಲಾಗಿದೆ. ಶಿವಣ್ಣ ಅವರು ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿರುವುದರ ಜೊತೆಗೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಸಂಸಾರವನ್ನು ಸಾಕಿ ಸಲಹುತ್ತಿದ್ದರು. ಆದರೆ, ಸುಂದರವಾಗಿದ್ದ ಈ ಕುಟುಂಬದಲ್ಲಿ ಪತ್ನಿಯ ನಡವಳಿಕೆ ಬಿರುಗಾಳಿ ಎಬ್ಬಿಸಿತ್ತು.

ಶಿವಣ್ಣ ಅವರ ಪತ್ನಿ ಕಾವ್ಯ ಎಂಬುವವರು ಕಳೆದ ಒಂದು ವಾರದ ಹಿಂದೆ ಇಬ್ಬರು ಮಕ್ಕಳನ್ನು ಬಿಟ್ಟು ಪರಪುರುಷನ ಜೊತೆ ಓಡಿಹೋಗಿದ್ದರು. ಈ ಸಂಬಂಧ ಶಿವಣ್ಣ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರ ಮಧ್ಯಸ್ಥಿಕೆ ಅಥವಾ ದೂರಿನ ಭೀತಿಯಿಂದ ಕಾವ್ಯ ಮನೆಗೆ ಮರಳಿದ್ದರಾದರೂ, ಆಕೆಯ ಮನಸ್ಸು ಮಾತ್ರ ಬದಲಾಗಿರಲಿಲ್ಲ. ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ತಕ್ಷಣ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಕಾವ್ಯ ಮತ್ತೆ ಪರಾರಿಯಾಗಿದ್ದರು.

ಪತ್ನಿಯ ಈ ದ್ರೋಹ ಹಾಗೂ ಸಮಾಜದಲ್ಲಿ ಎದುರಿಸಬೇಕಾದ ಮುಜುಗರದಿಂದ ಜಿಗುಪ್ಸೆಗೊಂಡ ಶಿವಣ್ಣ, ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಭಾವನೆಗೆ ಸಿಲುಕಿದ್ದರು. ಇದೇ ಕಾರಣಕ್ಕೆ ನಿನ್ನೆ ತಡರಾತ್ರಿ ಅವರು ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.

ಮೊದಲು ಗಾಢ ನಿದ್ರೆಯಲ್ಲಿದ್ದ ತನ್ನಿಬ್ಬರು ಪುಟ್ಟ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು, ನಂತರ ಮನೆಯಲ್ಲಿ ನೇಣು ಬಿಗಿದುಕೊಂಡು ತಾನೂ ಪ್ರಾಣ ಬಿಟ್ಟಿದ್ದಾರೆ. ಇಂದು ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಈ ಘೋರ ದುರಂತ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿಯ ತಪ್ಪು ನಿರ್ಧಾರ ಮತ್ತು ಹಣದ ವ್ಯಾಮೋಹಕ್ಕೆ ಇಬ್ಬರು ಹಸುಗೂಸುಗಳು ಹಾಗೂ ಒಬ್ಬ ಸಜ್ಜನ ವ್ಯಕ್ತಿ ಬಲಿಯಾಗಿರುವುದು ಇಡೀ ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿದೆ.

WhatsApp Group Join Now

Spread the love

Leave a Reply