ರಾಜ್ಯ ರಾಜಧಾನಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದರ ಹಿಂದೆ ಪತಿಯ ಕೈವಾಡವಿದೆ ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತುಮಕೂರಿನ ಹೆಗ್ಗೆರೆಯ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ (30) ಮೃತಪಟ್ಟ ದುರ್ದೈವಿ. ಸುಮಾರು 10 ವರ್ಷಗಳ ಹಿಂದೆ ಸುಜಾತ ಅವರು ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಎಂಬುವವರನ್ನು ವಿವಾಹವಾಗಿದ್ದರು. ಇಂದು ಬೆಳಿಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ಗೆ ಬಟ್ಟೆ ಹಾಕಲು ಹೋದಾಗ ಕರೆಂಟ್ ಶಾಕ್ ತಗುಲಿ ಸುಜಾತ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುಜಾತ ಅವರ ಸಾವು ಕೇವಲ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಪತಿಯ ಕಿರುಕುಳ ತಾಳಲಾರದೆ ಸುಜಾತ ಕಳೆದ ಮೂರು ತಿಂಗಳಿನಿಂದ ತವರು ಮನೆಯಲ್ಲೇ ವಾಸವಿದ್ದರು. ಕೇವಲ ಒಂದು ವಾರದ ಹಿಂದೆಯಷ್ಟೇ ಚೇತನ್ ಮತ್ತು ಆತನ ತಾಯಿ ಸುಜಾತಳ ಮನವೊಲಿಸಿ ಗೌಡಹಳ್ಳಿಯ ಮನೆಗೆ ಕರೆದುಕೊಂಡು ಬಂದಿದ್ದರು. ಮನೆಗೆ ಬಂದ ಎಂಟೇ ದಿನದಲ್ಲಿ ಸುಜಾತ ಶವವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಘಟನೆ ನಡೆದ ತಕ್ಷಣ ಸುಜಾತ ಅವರನ್ನು ಸಮೀಪದ ವಿಪಿ ಮ್ಯಾಗ್ನಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಆಕಸ್ಮಿಕ ಸಾವೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ ಮೆಷಿನ್ ಬಳಸುವಾಗ ಶಾಕ್ ತಗುಲಿ ಮಹಿಳೆ ಸಾವು, ಪತಿ ವಿರುದ್ಧ ಕೊಲೆ ಆರೋಪ.!
WhatsApp Group
Join Now