ಡಿ.ಕೆ ಶಿವಕುಮಾರ್‌ಗೆ ಸಿಎಂ ಪಟ್ಟ ನೀಡದಿದ್ದರೆ ಕಠೋರ ನಿರ್ಧಾರ : ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಣವಾನಂದ ಶ್ರೀ ಎಚ್ಚರಿಕೆ!

Spread the love

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಣವಾನಂದ ಸ್ವಾಮೀಜಿ ಕಾಂಗ್ರೆಸ್ ಹೈಕಮಾಂಡ್‌ಗೆ ಗಡುವು ನೀಡಿದ್ದಾರೆ. ಇದು 32 ಹಿಂದುಳಿದ ಸಮುದಾಯಗಳ ಮಠಾಧೀಶರ ಒತ್ತಾಯವಾಗಿದ್ದು, ನ್ಯಾಯ ಸಿಗದಿದ್ದರೆ ಕಠೋರ ನಿರ್ಧಾರದ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಣವಾನಂದ ಸ್ವಾಮೀಜಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಅವರನ್ನು ತಕ್ಷಣವೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಗಡುವು ನೀಡಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಬೇಡಿಕೆಯಲ್ಲ, ರಾಜ್ಯದ 32 ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರ ಒತ್ತಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಪ್ರಣವಾನಂದ ಶ್ರೀಗಳು, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲು ಡಿ.ಕೆ. ಶಿವಕುಮಾರ್ ಅವರ ಶ್ರಮ ಅಪಾರವಾಗಿದೆ. ಇಡೀ ರಾಜ್ಯ ಸುತ್ತಿ, ಸ್ವಂತ ಹಣ ಖರ್ಚು ಮಾಡಿ, ರಕ್ತ ಸುರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಹೈಕಮಾಂಡ್ ಅವರಿಗೆ ಕೊಟ್ಟಿರುವ ಮಾತನ್ನು ಕೂಡಲೇ ಈಡೇರಿಸಬೇಕು. ಸಂಕ್ರಾಂತಿ, ಯುಗಾದಿ ಮತ್ತು ಪಂಚರಾಜ್ಯ ಚುನಾವಣೆಗಳೆಲ್ಲ ಮುಗಿದಿವೆ. ಇನ್ನು ವಿಳಂಬ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಡಿಕೆಶಿ ಅವರಿಗೆ ಸಿಎಂ ಸ್ಥಾನ ನೀಡದೆ ವಿಳಂಬ ಮಾಡುತ್ತಿರುವುದು ಅವರಿಗೆ ಮಾಡುತ್ತಿರುವ ಅವಮಾನ ಮಾತ್ರವಲ್ಲ, ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಒಬ್ಬ ಸ್ವಾಭಿಮಾನಿ ನಾಯಕನಿಗೆ ನ್ಯಾಯ ನೀಡದಿದ್ದರೆ ಸಮಾಜ ಸುಮ್ಮನಿರುವುದಿಲ್ಲ. ಮೇ 15ಕ್ಕೆ ಡಿ.ಕೆ. ಶಿವಕುಮಾರ್ ಅವರ ಜನ್ಮದಿನವಿದ್ದು, ಹೈಕಮಾಂಡ್ ಅವರಿಗೆ ‘ಬರ್ತ್ ಡೇ ಗಿಫ್ಟ್’ ಆಗಿ ಸಿಎಂ ಸ್ಥಾನವನ್ನು ಘೋಷಿಸಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.

ಸಿದ್ದರಾಮಯ್ಯ ಅವರಿಗೆ ಕಿವಿಮಾತು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀಗಳು, ‘ಸಿದ್ದರಾಮಯ್ಯ ಅವರು ದೊಡ್ಡ ಮನಸ್ಸು ಮಾಡಿ ಅಧಿಕಾರವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು. ಹಾಗೆ ಮಾಡಿದರೆ ಅವರ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಅವರು ಎತ್ತರಕ್ಕೆ ಬೆಳೆಯುತ್ತಾರೆ. ಪಕ್ಷದಲ್ಲಿ ಕೆಲವರು ನಿರಂತರವಾಗಿ ಅಧಿಕಾರ ಅನುಭವಿಸುತ್ತಿದ್ದಾರೆ, ಆದರೆ ದುಡಿದವರಿಗೆ ಅವಕಾಶ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಬೇಡಿಕೆಯನ್ನು ಈಡೇರಿಸಲು ಹೈಕಮಾಂಡ್ ಮೇಲೆ ಒತ್ತಡ ಹೇರಲು ಸ್ವಾಮೀಜಿಗಳ ನಿಯೋಗ ಸಜ್ಜಾಗಿದೆ. ‘ನಾವು ಶೀಘ್ರದಲ್ಲೇ ಕೆ.ಸಿ. ವೇಣುಗೋಪಾಲ್ ಅವರನ್ನು ಕೇರಳದಲ್ಲಿ ಮತ್ತು ಇತರ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತೇವೆ. ಹೈಕಮಾಂಡ್ ನ್ಯಾಯ ನೀಡದಿದ್ದರೆ ಡಿ.ಕೆ. ಶಿವಕುಮಾರ್ ಅವರು ಕಠೋರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸ್ವಾಭಿಮಾನವನ್ನು ಒತ್ತೆ ಇಟ್ಟು ಪಕ್ಷದಲ್ಲಿ ಇರುವ ಅವಶ್ಯಕತೆಯಿಲ್ಲ’ ಎಂದು ಸ್ವಾಮೀಜಿ ಎಚ್ಚರಿಸಿದರು.

ಚಂಡಿಕಾ ಹೋಮ ಹಾಗೂ ಬೃಹತ್ ಸಮಾವೇಶ:

ಈ ಹೋರಾಟದ ಭಾಗವಾಗಿ ಮೇ 5ರಂದು ಕಲಬುರಗಿಯ ಅಂಬಾಭವಾನಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ‘ಚಂಡಿಕಾ ಹೋಮ’ ಆಯೋಜಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ಸಮುದಾಯಗಳ ಬೃಹತ್ ಸಮಾವೇಶ ನಡೆಸಿ ಹೈಕಮಾಂಡ್‌ಗೆ ತಾಕತ್ತು ತೋರಿಸಲು ಮಠಾಧೀಶರು ತೀರ್ಮಾನಿಸಿದ್ದಾರೆ.

WhatsApp Group Join Now

Spread the love

Leave a Reply