ತೆಲಂಗಾಣ: ಅಪಘಾತದಲ್ಲಿ ಮೃತ ಪಟ್ಟ ಮಗನನ್ನು ಕಳೆದುಕೊಂಡ ಪೋಷಕರು, ದುಃಖದ ನಡುವೆಯೂ ತಮ್ಮ ಹೃದಯ ವೈಶಾಲ್ಯತೆ, ಮಾನವೀಯತೆಯನ್ನು ತೋರಿದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಅಗಲಿಕೆಯಿಂದ ಉಂಟಾದ ನೋವಿನ ನಡುವೆಯೂ ತಮ್ಮ ಪುತ್ರನನ್ನು ಎಂಟು ಜನರಲ್ಲಿ ಜೀವಂತವಾಗಿಡಲು ನಿರ್ಧರಿಸಿದ ಹೆತ್ತವರಿಗೆ ದೇಶವ್ಯಾಪಿ ಮೆಚ್ಚುಗೆಗಳು ಹರಿದುಬಂದಿವೆ.
ಅನಿರೀಕ್ಷಿತ ಅಪಘಾತ, 8 ಮಂದಿಗೆ ಮರುಜನ್ಮ
ಸಣ್ಣ ಅಪಘಾತದಿಂದ ಮಿದುಳು ನಿಷ್ಕ್ರಿಯಗೊಂಡು ಸಾವಿಗೆ ತುತ್ತಾದ ಉದಯ್, ಮೃತಪಟ್ಟ ಮೇಲೂ ಎಂಟು ಜನರಲ್ಲಿ ಉಸಿರಾಟ ಮುಂದುವರಿಸಬೇಕೆಂಬುದು ಪೋಷಕರ ನಿರ್ಧಾರ. ಮಗನ ಬಹು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕಿರಣ್ ಪೋಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಈ ನಿರ್ಧಾರದಿಂದ 8 ಜನರಿಗೆ ಮರು ಜನ್ಮ ಸಿಕ್ಕಂತಾಗಿದೆ.
ಯುವಕನ ಸಾವಿಗೆ ಕಾರಣವೇನು?
ಸಂಗರೆಡ್ಡಿ ಜಿಲ್ಲೆಯ ಕೊಥ್ಲಾಪುರ ಗ್ರಾಮದ ಉದಯ್ ಕಿರಣ್ (22) ಇತ್ತೀಚೆಗೆ ಬಿ.ಟೆಕ್ ಮುಗಿಸಿದ್ದರು. ಭವಿಷ್ಯದಲ್ಲಿ ಒಂದೊಳ್ಳೆ ಕೆಲಸ ಪಡೆಯುವ ಗುರಿ ಹೊಂದಿದ್ದ ಅವರು, ಹೈದರಾಬಾದ್ನಲ್ಲಿ ಟ್ರೇನಿಂಗ್ ಕೂಡ ಪಡೆಯುತ್ತಿದ್ದರು. ತಂದೆ-ತಾಯಿಯ ಕನಸುಗಳನ್ನು ಮಗನಾಗಿ ಈಡೇರಿಸಲು ಶ್ರಮಿಸುತ್ತಿದ್ದ ಜೀವ, ಈ ವರ್ಷದ ಏ.4ರಂದು, ಹೈದರಾಬಾದ್ನ ನಿಜಾಮ್ಪೇಟೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ, ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಈ ಅಪಘಾತದಲ್ಲಿ, ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿತು.
ಅಪಘಾತದಲ್ಲಿ ಮಿದುಳು ನಿಷ್ಕ್ರಿಯ
ಘಟನೆ ಬೆನ್ನಲ್ಲೇ ಕಿರಣ್ರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಅವರಿಗೆ ಒಂದು ವಾರ ಸತತವಾಗಿ ಚಿಕಿತ್ಸೆ ನೀಡಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಏ.11ರಂದು ಉದಯ್ ಕಿರಣ್ ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ದೃಢಪಡಿಸಿದರು. ಮಗ ಗುಣಮುಖನಾಗಿ ವಾಪಾಸ್ ಬರುತ್ತಾನೆ ಎಂದು ಕಾಯುತ್ತಿದ್ದ ಪೋಷಕರಿಗೆ, ಈ ಸುದ್ದಿ ತಿಳಿದು ಪ್ರಪಂಚವೇ ಛಿದ್ರಗೊಂಡಂತಾಯಿತು. ಇಷ್ಟಾದರೂ ತಮ್ಮ ಮಗನನ್ನು ಜೀವಂತವಾಗಿ ಇನ್ನೊಬ್ಬರಲ್ಲಿ ನೋಡಲು ಬಯಸಿದ ಹೆತ್ತವರು, ಕಿರಣ್ರ ಅಂಗಾಂಗಳನ್ನು 8 ಮಂದಿಗೆ ದಾನ ಮಾಡಲು ನಿರ್ಧರಿಸಿದರು.
ವೈದ್ಯರ ಸಲಹೆಯಂತೆ ಪುತ್ರನ ಅಂಗಗಳನ್ನು ದಾನ ಮಾಡಲು ಒಪ್ಪಿಕೊಂಡ ಕಿರಣ್ ಪೋಷಕರು, ಕಿರಣ್ ಅವರ ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು, ಯಕೃತ್ತು ಮತ್ತು ಕಣ್ಣುಗಳಂತಹ ಬಹು ಅಂಗಾಗಳನ್ನು ಸಂಗ್ರಹಿಸಿ ಅಗತ್ಯವಿರುವ ರೋಗಿಗಳಿಗೆ ಕಸಿ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಉದಯ್ ಕಿರಣ್, ಬರೋಬ್ಬರಿ ಎಂಟು ಮಂದಿಗೆ ಹೊಸ ಜೀವನವನ್ನು ನೀಡಿರುವುದು ಶ್ಲಾಘನೀಯ.
ಕಣ್ಣು, ಹೃದಯ, ಲಿವರ್… ಸಾವಿನಲ್ಲೂ ಸಾರ್ಥಕತೆ ಮೆರೆದ ಉದಯ್ ಕಿರಣ್! 8 ಜನರಿಗೆ ಮರುಜನ್ಮ ಕೊಟ್ಟ ಯುವಕನಿಗೆ ಸಲಾಂ
WhatsApp Group
Join Now