ಕರ್ನಾಟಕದ 5 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿಯಾಗಿದೆ. ಈ ಮೂಲಕ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಸಮಗ್ರ ದಾಳಿಗಳು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಚಿತ್ರದುರ್ಗ, ಮೈಸೂರು, ಬಳ್ಳಾರಿ, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದ ಈ ಕಾರ್ಯಾಚರಣೆಗಳಲ್ಲಿ ಹಲವಾರು ಸರ್ಕಾರಿ ಅಧಿಕಾರಿಗಳ ಮನೆಗಳು, ಕಚೇರಿಗಳು ಹಾಗೂ ಸಂಬಂಧಿತ ಸ್ಥಳಗಳಲ್ಲಿ ತೀವ್ರ ಪರಿಶೀಲನೆ ನಡೆಸಲಾಗಿದೆ.
ಚಿತ್ರದುರ್ಗದಲ್ಲಿ ವಿ.ಆರ್.ಎಸ್ ಪಡೆದ ಮಹಿಳಾ ಅಧಿಕಾರಿ ಮನೆ ಮೇಲೆ ದಾಳಿ
ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮೆದೇಹಳ್ಳಿ ಬಡಾವಣೆಯಲ್ಲಿರುವ ಮನೆ ಹಾಗೂ ಹಿರಿಯೂರು ತಾಲೂಕಿನ ಯಾದಲಘಟ್ಟ ಗ್ರಾಮದ ತೋಟದ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಒಂದು ವರ್ಷದ ಹಿಂದೆ ವಿ.ಆರ್.ಎಸ್ ಪಡೆದಿದ್ದ ಸುಶೀಲಮ್ಮ ಅವರು ಸೇವೆಯಲ್ಲಿದ್ದಾಗ ಭ್ರಷ್ಟಾಚಾರ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಹಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಮೈಸೂರು AEE ಮನೆಗೆ ದಾಳಿ
ಮೈಸೂರು ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ರೇವಣ್ಣ ವಿರುದ್ಧವೂ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮೈಸೂರಿನ ಕಚೇರಿ ಹಾಗೂ ಮಂಡ್ಯ ಜಿಲ್ಲೆಯಲ್ಲಿರುವ ಎರಡು ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಎಸ್‌ಪಿ ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಶೈಲೇಂದ್ರ ಮತ್ತು ವೆಂಕಟೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಶಶಿಕುಮಾರ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ಬಳ್ಳಾರಿ ಮೀನುಗಾರಿಕಾ ಇಲಾಖೆಯ ನಿರ್ದೇಶಕನಿಗೆ ಸೇರಿದ 4 ಸ್ಥಳಗಳಲ್ಲಿ ದಾಳಿ
ಬಳ್ಳಾರಿಯಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಣ್ಣ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಸಿದ್ಧಾರ್ಥನಗರದಲ್ಲಿರುವ ನಿವಾಸ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಶಿವಣ್ಣ ವಿರುದ್ಧ 10ಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತರಿಗೆ ಸಲ್ಲಿಕೆಯಾಗಿದ್ದವು ಎನ್ನಲಾಗಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಆದಾಯ ಗಳಿಕೆ ಆರೋಪಗಳ ಹಿನ್ನೆಲೆ ದಾಳಿ ನಡೆಸಲಾಗಿದ್ದು, ಅವರು ಬಳಸುತ್ತಿದ್ದ ಸರ್ಕಾರಿ ಬೊಲೆರೋ ವಾಹನದಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವುದು ಕೂಡ ಗಮನಾರ್ಹ ಸಂಗತಿಯಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಶೋಭಾ ಕೆ.ಆರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ
ಶಿವಮೊಗ್ಗದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶೋಭಾ ಕೆ.ಆರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಕಾರಿಪುರದ ಮನೆ, ತರಲಘಟ್ಟದ ಫಾರ್ಮ್ ಹೌಸ್, ಆಚಾಪುರದಲ್ಲಿರುವ ಶಾಲೆ ಸೇರಿದಂತೆ ಒಟ್ಟು ನಾಲ್ಕು ಕಡೆ ಪರಿಶೀಲನೆ ನಡೆದಿದೆ. ಜೊತೆಗೆ ಅವರ ಸಹೋದ್ಯೋಗಿ ರಾಘವೇಂದ್ರ ಅವರ ಚಾಲುಕ್ಯನಗರ ನಿವಾಸದಲ್ಲಿಯೂ ಶೋಧ ಕಾರ್ಯ ನಡೆದಿದೆ. ಲೋಕಾಯುಕ್ತ ಎಸ್‌ಪಿ ಕೌಲಾಂಪುರ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.
ಬೆಳಗಾವಿಯಲ್ಲಿ ಮಧನಸಿಂಗ ರಜಪೂತ್ ವಿರುದ್ಧ ಭ್ರಷ್ಟಾಚಾರ ಆರೋಪ
ಬೆಳಗಾವಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಸದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಧನಸಿಂಗ ರಜಪೂತ್ ವಿರುದ್ಧವೂ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಳಿ ನಡೆದಿದೆ. ಆಂಜನೇಯನಗರದಲ್ಲಿರುವ ಮನೆ ಸೇರಿದಂತೆ ಮೂರು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಹುಕ್ಕೇರಿ ಹಾಗೂ ಅಥಣಿ ತಾಲೂಕಿನ ನಿವಾಸಗಳಲ್ಲಿಯೂ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ಚಿನ್ನಾಭರಣ ಹಾಗೂ ಬ್ಯಾಂಕ್ ಠೇವಣಿಗಳ ಕುರಿತು ಮಹತ್ವದ ದಾಖಲೆಗಳು ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಡಿಎಸ್ಪಿಗಳಾದ ಬಿ.ಎಸ್. ಪಾಟೀಲ ಮತ್ತು ಭರತ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಮುಂದುವರಿದಿದ್ದು, ದಾಖಲೆಗಳ ಪರಿಶೀಲನೆ ಇನ್ನೂ ನಡೆಯುತ್ತಿದೆ. ಒಟ್ಟಾರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದೇ ಸಮಯದಲ್ಲಿ ನಡೆದ ಈ ಲೋಕಾಯುಕ್ತ ದಾಳಿಗಳು ಭ್ರಷ್ಟಾಚಾರ ವಿರುದ್ಧದ ಕಠಿಣ ಕ್ರಮದ ಸೂಚನೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಹಿರಂಗವಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಲೋಕಾಯುಕ್ತರ ಮಿಂಚಿನ ದಾಳಿ: 5 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ದಾಖಲೆಗಳ ಪರಿಶೀಲನೆ
WhatsApp Group
Join Now