ಪ್ರಧಾನಿ ಮೋದಿ ತಾಯಿ ಬಗ್ಗೆ ನಕಲಿ ಟ್ವೀಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ನಟ ಪ್ರಕಾಶ್ ರೈ ಸಿಡಿಮಿಡಿ.!

Spread the love

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟ ಪ್ರಕಾಶ್ ರೈ, ತಮ್ಮ ಹೆಸರಿನಲ್ಲಿ ಹರಡಲಾಗಿರುವ ನಕಲಿ ಟ್ವೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್ ಅವರ ಬಗ್ಗೆ ಅವಹೇಳನಕಾರಿ ಸಂದೇಶವಿರುವ ಸ್ಕ್ರೀನ್‌ಶಾಟ್ ವೈರಲ್ ಆಗಿದ್ದಕ್ಕೆ ನಟ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಪ್ರಕಾಶ್ ರೈ ಅವರ ತಾಯಿ ಸ್ವರ್ಣಲತಾ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ತಾಯಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪ್ರಕಾಶ್ ರೈ ಭಾವುಕರಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೇ ಸಮಯವನ್ನು ಉಪಯೋಗಿಸಿಕೊಂಡಿದ್ದ ಕೆಲವು ಕಿಡಿಗೇಡಿಗಳು, ಪ್ರಕಾಶ್ ರೈ ಅವರು ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ನಿಂದಿಸಿದ್ದಾರೆ ಎಂಬಂತೆ ಬಿಂಬಿಸುವ ನಕಲಿ ಟ್ವೀಟ್ ಒಂದನ್ನು ಸೃಷ್ಟಿಸಿದ್ದರು. ಆ ಪೋಸ್ಟ್‌ನಲ್ಲಿ ಪ್ರಧಾನಿಯವರ ಬಗ್ಗೆ ಅತ್ಯಂತ ಕೆಳಮಟ್ಟದ ಭಾಷೆ ಬಳಸಲಾಗಿತ್ತು.

ಪ್ರಕಾಶ್‌ ರೈ ಹೆಸರಿನಲ್ಲಿ ವೈರಲ್‌ ಆಗ್ತಿರೋ ನಕಲಿ ಟ್ವೀಟ್‌ನಲ್ಲಿ, ‘ಹೀರಾಬೆನ್ ಮೋದಿಗೆ ಶಾಂತಿ ಸಿಗಲಿ … ಆದರೆ ನೀವು ಭಾರತವನ್ನು ಹಾಳು ಮಾಡುತ್ತಿರುವ ದುಷ್ಕರ್ಮಿಗೆ ಜನ್ಮ ನೀಡಿದ್ದೀರಿ’ ಅಂತಾ ಬರೆಯಲಾಗಿತ್ತು. ಈ ನಕಲಿ ಟ್ವೀಟ್‌ ಬಗ್ಗೆಯೇ ಪ್ರಕಾಶ್‌ ರೈ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಈ ನಕಲಿ ಸಂದೇಶ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪ್ರಕಾಶ್ ರೈ, ಎಕ್ಸ್‌ನಲ್ಲಿ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಮತಾಂಧರು ನನ್ನ ಹೆಸರಿನಲ್ಲಿ ಫೇಕ್ ಟ್ವೀಟ್ ಸೃಷ್ಟಿಸಿ, ತಮ್ಮದೇ ನಾಯಕನನ್ನು ನಿಂದಿಸುತ್ತಿದ್ದಾರೆ. ಏಪ್ರಿಲ್ ಫೂಲ್ ದಿನದಂದು ಈ ಕೃತ್ಯ ಎಸಗುವ ಮೂಲಕ ನೀವೇ ಅತೀ ದೊಡ್ಡ ಮೂರ್ಖರಾಗಿದ್ದೀರಿ. ನೀವೇ ದೊಡ್ಡ ಜೋಕ್‌ ಎಂದು ಬರೆಯುವ ಮೂಲಕ ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

ವೈಯಕ್ತಿಕವಾಗಿ ತಾಯಿಯ ಅಗಲಿಕೆಯ ನೋವಿನಲ್ಲಿದ್ದರೂ, ಪ್ರಕಾಶ್ ರೈ ಅವರು ವೃತ್ತಿ ಬದುಕಿನಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಅವರು ಡಕಾಯ್ತ್, ಜಿ2 ಮತ್ತು ವಾರಣಾಸಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಜಕೀಯ ವಿಡಂಬನೆ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಸದಾ ಧ್ವನಿ ಎತ್ತುವ ಪ್ರಕಾಶ್‌ ರೈ, ಈ ಬಾರಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕವೇ ತಿರುಗೇಟು ನೀಡಿದ್ದಾರೆ.

WhatsApp Group Join Now

Spread the love

Leave a Reply