ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ ಸ್ವತಃ ಮಗಳೇ ವಿಷದ ಮಿಲ್ಕ್ಶೇಕ್ ನೀಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು ಆರೋಪಿ ಪುತ್ರಿ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ.
2023ರ ಏಪ್ರಿಲ್ 25ರಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಜಯಂತ್ ಬಲ್ಲಾವರ್ (45) ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಅವರ ಪುತ್ರಿ ಆರ್ಯ (ಈಕೆಯೂ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಳು) ತಂದೆಗೆ ಮಿಲ್ಕ್ಶೇಕ್ ನೀಡಿದ್ದಳು. ಅದನ್ನು ಕುಡಿದು ಜಯಂತ್ ಅವರು ಚಂದ್ರಾಪುರದ ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಭವನಕ್ಕೆ ತಲುಪುವಷ್ಟರಲ್ಲಿ ತೀವ್ರ ತಲೆಸುತ್ತು ಬಂದು ಕುಸಿದು ಬಿದ್ದರು. ತಕ್ಷಣವೇ ಅವರು ಮೃತಪಟ್ಟಿದ್ದರು.
ಆ ಸಮಯದಲ್ಲಿ ಇದನ್ನು ‘ಹಠಾತ್ ಅನಾರೋಗ್ಯ’ದಿಂದ ಸಂಭವಿಸಿದ ಸಾವು ಎಂದು ದಾಖಲಿಸಲಾಗಿತ್ತು. ಯಾವುದೇ ಕ್ರಿಮಿನಲ್ ಸಂಚಿನ ಶಂಕೆ ಇಲ್ಲದ ಕಾರಣ ಪ್ರಕರಣದ ಫೈಲ್ ಕ್ಲೋಸ್ ಮಾಡಲಾಗಿತ್ತು.
ಮೂರು ವರ್ಷಗಳ ಬಳಿಕ ಬಯಲಾದ ರಹಸ್ಯ
ಈಗ ಪೊಲೀಸರು ಈ ಸಾವನ್ನು ವ್ಯವಸ್ಥಿತವಾಗಿ ಯೋಜಿಸಿ ಮಾಡಿದ ಕೊಲೆ ಎಂದು ವಿವರಿಸಿದ್ದಾರೆ. ತನಿಖೆಯ ಪ್ರಕಾರ, ಆರ್ಯ ಬಲ್ಲಾವರ್ 2022 ರಿಂದ ಆಶಿಶ್ ಶೇಡ್ಮೇಕೆ ಎಂಬುವವರ ಜೊತೆ ಪ್ರೀತಿಯಲ್ಲಿದ್ದಳು. ತಂದೆ ಜಯಂತ್ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರೀತಿಗೆ ಅಡ್ಡಿಯಾಗಿದ್ದ ತಂದೆಯನ್ನು ಹಾದಿಯಿಂದ ತಪ್ಪಿಸಲು ಈ ಜೋಡಿ ಸಂಚು ರೂಪಿಸಿತ್ತು.
ವಿಷವನ್ನು ತರಿಸಲು ಆರ್ಯ ತನ್ನ ಸೋದರಸಂಬಂಧಿ ಚೈತನ್ಯ ಗೆಡಾಮ್ (22) ಎಂಬಾತನಿಗೆ 5,000 ರೂಪಾಯಿ ನೀಡಿದ್ದಳು. ಈ ವಿಷವನ್ನು ಮತ್ತೋರ್ವ ವ್ಯಕ್ತಿ ಸರಬರಾಜು ಮಾಡಿದ್ದ. ಅಂದು ಬೆಳಿಗ್ಗೆ ಆರ್ಯ ಮಿಲ್ಕ್ಶೇಕ್ನಲ್ಲಿ ವಿಷ ಬೆರೆಸಿ ತಂದೆಗೆ ಕುಡಿಸಿದ್ದಳು. ಸಾವಿನ ನಂತರ ಶವಪರೀಕ್ಷೆ ನಡೆಸದ ಕಾರಣ ಇದುವರೆಗೂ ಯಾರಿಗೂ ಅನುಮಾನ ಬಂದಿರಲಿಲ್ಲ.
ಪತಿಯಿಂದಲೇ ಗುಟ್ಟು ರಟ್ಟು
ಜಯಂತ್ ಮೃತಪಟ್ಟ ನಂತರ ಆರ್ಯ ಮತ್ತು ಆಶಿಶ್ ವಿವಾಹವಾಗಿದ್ದರು. ಆದರೆ ಇವರ ಸಂಸಾರದಲ್ಲಿ ಬೇಗನೆ ಬಿರುಕು ಮೂಡಿತು. ಅಶಿಸ್ತು ಮತ್ತು ಕೆಟ್ಟ ನಡವಳಿಕೆಯಿಂದಾಗಿ ಆಶಿಶ್ನನ್ನು ಪೊಲೀಸ್ ತರಬೇತಿಯಿಂದ ವಜಾಗೊಳಿಸಲಾಯಿತು. ಇದರಿಂದ ಬೇಸತ್ತ ಆರ್ಯ ಪತಿಯ ಮನೆಗೆ ಹೋಗದೆ ತವರು ಮನೆಯಲ್ಲೇ ಉಳಿದುಕೊಂಡಳು. ಈ ವಿಚಾರವಾಗಿ ದಂಪತಿಗಳ ನಡುವೆ ಸತತ ಜಗಳ ನಡೆಯುತ್ತಿತ್ತು. ಕಳೆದ ವಾರ, ಆಕ್ರೋಶಗೊಂಡ ಆಶಿಶ್ ನೇರವಾಗಿ ಪೊಲೀಸ್ ಠಾಣೆಗೆ ನಡೆದು ಬಂದು ಸತ್ಯ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿಯೇ ಮೂರು ವರ್ಷಗಳ ಹಿಂದೆ ತಂದೆಗೆ ವಿಷ ನೀಡಿ ಕೊಂದಿದ್ದಾಳೆ ಮತ್ತು ಸೋದರಸಂಬಂಧಿಯ ಮೂಲಕ ವಿಷ ತರಿಸಿದ್ದಳು ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.
ಆಶಿಶ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಈಗ ಆರ್ಯ ಬಲ್ಲಾವರ್, ಆಕೆಯ ಪತಿ ಆಶಿಶ್ ಶೇಡ್ಮೇಕೆ, ಸೋದರಸಂಬಂಧಿ ಚೈತನ್ಯ ಗೆಡಾಮ್ ಮತ್ತು ವಿಷ ಸರಬರಾಜು ಮಾಡಿದ ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ನಾಲ್ವರೂ ಪೊಲೀಸ್ ಕಸ್ಟಡಿಯಲ್ಲಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ತಂದೆಗೆ ವಿಷದ ಮಿಲ್ಕ್ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ
WhatsApp Group
Join Now