ಮದುವೆಯಾದ ತಂಗಿಯ ಮೇಲೆ ಕಣ್ಣುಹಾಕಿದ ಬಾಮೈದನ ಕಥೆ ಮುಗಿಸಿದ ಭಾವ!

Spread the love

ರಾಜಧಾನಿಯ ಹೊರವಲಯದ ಆನೇಕಲ್ ತಾಲೂಕಿನಲ್ಲಿ ಸಂಬಂಧಗಳ ನಡುವಿನ ಸಂಘರ್ಷ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಭಾವನೇ ತನ್ನ ಬಾಮೈದನನ್ನು ಅಮಾನುಷವಾಗಿ ಹತ್ಯೆ ಮಾಡಿ, ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬನ್ನೇರುಘಟ್ಟ ಸಮೀಪದ ಬೈರಪ್ಪನಹಳ್ಳಿ ನಿವಾಸಿ ಶ್ರೀನಿವಾಸ್ ಕೊಲೆ ಮಾಡಿದ ಆರೋಪಿ. ಮರಸೂರು ಮೂಲದ ರಂಜಿತ್ (24) ಕೊಲೆಯಾದ ದುರ್ದೈವಿ. ವಿಶೇಷವೆಂದರೆ, ಶ್ರೀನಿವಾಸ್ ಅವರು ರಂಜಿತ್‌ನ ಸ್ವಂತ ಅಕ್ಕ ಪವಿತ್ರಾ ಎಂಬುವವರನ್ನು ವಿವಾಹವಾಗಿದ್ದರು. ಈ ಮೂಲಕ ರಂಜಿತ್ ಆರೋಪಿ ಶ್ರೀನಿವಾಸ್‌ಗೆ ಸ್ವಂತ ಬಾಮೈದನಾಗಿದ್ದ.

ಕೊಲೆಗೆ ಕಾರಣವೇನು?

ಆರೋಪಿ ಶ್ರೀನಿವಾಸ್‌ನ ತಂಗಿ ಕೋಮಲ ಎಂಬಾಕೆಯ ಜೊತೆ ರಂಜಿತ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕೋಮಲಳಿಗೆ ಈಗಾಗಲೇ ಬೇರೊಬ್ಬರ ಜೊತೆ ಮದುವೆಯಾಗಿತ್ತು. ಆದರೆ, ಆಕೆ ತನ್ನ ಗಂಡನನ್ನು ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರ ಎರಡು ಕುಟುಂಬಗಳ ನಡುವೆ ದೊಡ್ಡ ಮಟ್ಟದ ಗಲಾಟೆ ಮತ್ತು ಮುನಿಸಿಗೆ ಕಾರಣವಾಗಿತ್ತು. ತನ್ನ ಕುಟುಂಬದ ಮರ್ಯಾದೆ ಹರಾಜಾಗುತ್ತಿದೆ ಎಂದು ಕುದಿಯುತ್ತಿದ್ದ ಶ್ರೀನಿವಾಸ್, ರಂಜಿತ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಆತ ಕಿವಿಗೊಟ್ಟಿರಲಿಲ್ಲ. ಇದರಿಂದ ಆಕ್ರೋಶಗೊಂಡ ಶ್ರೀನಿವಾಸ್ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ.

ಸಿನಿಮೀಯ ಮಾದರಿಯಲ್ಲಿ ಕೊಲೆ

ಇಂದು ಸಂಜೆ ವೇಳೆ ರಂಜಿತ್‌ನನ್ನು ಮಾತನಾಡುವ ನೆಪದಲ್ಲಿ ಕಾರಿನಲ್ಲಿ ಕರೆತಂದ ಶ್ರೀನಿವಾಸ್, ಬನ್ನೇರುಘಟ್ಟದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ರಕ್ತಸಿಕ್ತ ಮೃತದೇಹವನ್ನು ತನ್ನದೇ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ನೇರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಅಲ್ಲಿ ಪೊಲೀಸರ ಮುಂದೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

WhatsApp Group Join Now

Spread the love

Leave a Reply