ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸಿ, ಆ ಕುಟುಂಬಗಳ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ದು ಬಿಜೆಪಿ. ಇಂತಹ ಅಯೋಗ್ಯರಿಗೆ ಮತ ಹಾಕಬೇಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಹಿತವನ್ನು ಕಾಂಗ್ರೆಸ್ ಮಾತ್ರ ಕಾಪಾಡಲು ಸಾಧ್ಯ. ಹೊಸ ತಲೆಮಾರು ರಾಜಕಾರಣಕ್ಕೆ ಬರಬೇಕು. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಕಷ್ಟು ಅವಕಾಶ ಮತ್ತು ಸವಲತ್ತುಗಳನ್ನು ಕಾಂಗ್ರೆಸ್ ನೀಡಿದೆ. ಸಚಿವ ಸಂಪುಟ, ವಿಧಾನಸಭೆಯ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದೆ. ಇದೇ ಕಾರಣಕ್ಕೆ ಓಲೈಕೆ ರಾಜಕಾರಣ ಮಾಡುತ್ತಿದ್ದೇವೆ ಎಂಬ ಟೀಕೆಗೆ ಗುರಿ ಆಗಿದ್ದೇವೆ. ಅಲ್ಪಸಂಖ್ಯಾತ ಸಮುದಾಯದ ಜನರು ಇದನ್ನು ಅರ್ಥ ಮಾಡಿಕೊಂಡು ಮತಚಲಾವಣೆ ಮಾಡಬೇಕು ಎಂದು ಕೋರಿದರು.
ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಆದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನನಗೆ ಪಕ್ಷ ಅವಕಾಶ ಮಾಡಿಕೊಟ್ಟಿಲ್ಲವೇ? ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ಕೂಡ ಇದೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರ ತಂದೆ ದಾಸಕರಿಯಪ್ಪ ಕೂಡ ರಾಜಕಾರಣದಲ್ಲಿದ್ದವರು. ಬಿಜೆಪಿ ಕುಟುಂಬ ರಾಜಕಾರಣ ಮಾಡಿದರೆ ಸರಿಯೇ? ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಹಾಳಾಗಿದೆ. ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ಅಮೆರಿಕದ ಮಾತು ಕೇಳಿ ನಿಲ್ಲಿಸಿದ್ದಾರೆ. ಇರಾನ್- ಅಮರಿಕ ಯುದ್ಧದಲ್ಲಿ ಭಾರತ ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಇದಕ್ಕೆ ಏಕೆ 56 ಇಂಚಿನ ಎದೆಯ ನಾಯಕ ಪರಿಹಾರ ನೀಡಿಲ್ಲ. 11 ವರ್ಷಗಳಿಂದ ದೇಶ ಅಭಿವೃದ್ಧಿ ಕಂಡಿಲ್ಲ. ಕೆಸರಲ್ಲಿ ಇರುವ ಕಮಲವನ್ನು ಅಲ್ಲೇ ಇರಲು ಬಿಡಿ ಎಂದು ಲೇವಡಿ ಮಾಡಿದರು.
ಕೆಸರಲ್ಲಿ ಇರುವ ಕಮಲವನ್ನು ಅಲ್ಲೇ ಇರಲು ಬಿಡಿ : ದೇಶಭಕ್ತಿ ಪ್ರಶ್ನಿಸಿದ ಅಯೋಗ್ಯರಿಗೆ ಮತ ಹಾಕಬೇಡಿ : ಮುಸ್ಲಿಮರಿಗೆ ಪ್ರದೀಪ್ ಈಶ್ವರ್ ಮನವಿ
WhatsApp Group
Join Now