ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಜಗತ್ತನ್ನು ಕಾಡುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಹಸಿವು, ಬಾಯಾರಿಕೆ ಅಥವಾ ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಇದಕ್ಕಿಂತ ಮುಖ್ಯವಾಗಿ ನಮ್ಮ ಪಾದಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಬದಲಾವಣೆಗಳು ಮಧುಮೇಹದ ಮುನ್ಸೂಚನೆಯಾಗಿರುತ್ತವೆ.
ನಮ್ಮ ದೇಹದ ಸಂಪೂರ್ಣ ಭಾರವನ್ನು ಹೊರುವ ಪಾದಗಳು, ದೇಹದ ಒಳಗಿನ ಅನಾರೋಗ್ಯದ ಬಗ್ಗೆ ಮೊದಲು ಸುಳಿವು ನೀಡುತ್ತವೆ. ವರದಿಯ ಪ್ರಕಾರ, ಪಾದಗಳಲ್ಲಿನ ಈ ಕೆಳಗಿನ ಬದಲಾವಣೆಗಳು ಮಧುಮೇಹದ ಲಕ್ಷಣವಾಗಿರಬಹುದು:
೧. ಪಾದಗಳಲ್ಲಿ ಜುಮ್ಮೆನ್ನುವುದು (Tingling Sensation)
ಪಾದಗಳಲ್ಲಿ ಆಗಾಗ ಇರುವೆ ಹರಿದಂತೆ ಅಥವಾ ಮುಳ್ಳು ಚುಚ್ಚಿದಂತೆ ಭಾಸವಾಗುತ್ತಿದ್ದರೆ ಎಚ್ಚರ. ಒಂದೇ ಕಡೆ ದೀರ್ಘಕಾಲ ಕುಳಿತುಕೊಂಡಾಗ ಹೀಗಾಗುವುದು ಸಹಜ. ಆದರೆ, ಪದೇ ಪದೇ ಅಥವಾ ಕಾರಣವಿಲ್ಲದೆ ಜುಮ್ಮೆನ್ನುತ್ತಿದ್ದರೆ ಅದು ನರಗಳ ಹಾನಿಯ (Peripheral Neuropathy) ಲಕ್ಷಣವಾಗಿರಬಹುದು.
೨. ಕಾಲಿನ ಕೂದಲು ದಿಢೀರ್ ಉದುರುವುದು
ಕಾಲುಗಳ ಮೇಲಿನ ಕೂದಲು ಇದ್ದಕ್ಕಿದ್ದಂತೆ ಉದುರಲಾರಂಭಿಸಿದರೆ ಅದನ್ನು ಕೇವಲ ಚರ್ಮದ ಸಮಸ್ಯೆ ಎಂದು ಭಾವಿಸಬೇಡಿ. ಮಧುಮೇಹದಿಂದಾಗಿ ರಕ್ತಪರಿಚಲನೆ ಕಡಿಮೆಯಾದಾಗ, ಕೂದಲಿನ ಬೇರುಗಳಿಗೆ ಸರಿಯಾದ ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗದೆ ಕೂದಲು ಉದುರತೊಡಗುತ್ತವೆ.
೩. ಚರ್ಮದ ಬಣ್ಣ ಬದಲಾಗುವುದು
ಕೆಲವೊಮ್ಮೆ ಪಾದದ ಹಿಮ್ಮಡಿ ಅಥವಾ ಪಾದದ ಸುತ್ತಲಿನ ಚರ್ಮದ ಬಣ್ಣ ಬದಲಾಗಿ ಕಪ್ಪು ಕಲೆಗಳು ಕಾಣಿಸಿಕೊಳ್ಳಬಹುದು. ಇದನ್ನು ಅನೇಕರು ಧೂಳು ಅಥವಾ ಸೂರ್ಯನ ಬಿಸಿಲಿನಿಂದಾದ ‘ಟ್ಯಾನ್’ ಎಂದು ತಪ್ಪು ತಿಳಿಯುತ್ತಾರೆ. ಆದರೆ ರಕ್ತದಲ್ಲಿನ ಅಧಿಕ ಸಕ್ಕರೆ ಅಂಶವು ರಕ್ತನಾಳಗಳ ಮೇಲೆ ಪರಿಣಾಮ ಬೀರಿದಾಗ ಇಂತಹ ಕಲೆಗಳು ಉಂಟಾಗುತ್ತವೆ.
೪. ಅನಿರೀಕ್ಷಿತ ಕಾಲು ನೋವು ಮತ್ತು ಸೆಳೆತ (Cramps)
ರಾತ್ರಿಯ ಸಮಯದಲ್ಲಿ ಹಠಾತ್ ಕಾಲು ನೋವು ಅಥವಾ ಸ್ನಾಯುಗಳ ಸೆಳೆತ ಉಂಟಾಗುವುದು ಮಧುಮೇಹದ ಸಂಕೇತವಿರಬಹುದು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ (Dehydration) ಅಥವಾ ಸ್ನಾಯುಗಳಿಗೆ ಸರಿಯಾಗಿ ರಕ್ತ ಸಂಚಾರವಾಗದಿದ್ದಾಗ ಇಂತಹ ಸೆಳೆತಗಳು ಕಾಣಿಸಿಕೊಳ್ಳುತ್ತವೆ.
೫. ಪಾದದ ಉಷ್ಣತೆಯಲ್ಲಿ ಏರುಪೇರು
ಕೆಲವೊಮ್ಮೆ ಪಾದಗಳು ಅತಿಯಾಗಿ ತಣ್ಣಗಾಗುವುದು ಅಥವಾ ಅತಿಯಾದ ಉರಿ ಕಾಣಿಸಿಕೊಳ್ಳುವುದು ರಕ್ತನಾಳಗಳ ಹಾನಿಯ ಸೂಚನೆಯಾಗಿದೆ. ಪಾದಗಳ ಉಷ್ಣತೆಯಲ್ಲಿ ನಿರಂತರ ವ್ಯತ್ಯಾಸ ಕಂಡುಬರುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಪಾದಗಳಲ್ಲಿ ಜುಮ್ಮೆನ್ನುತ್ತಿದೆಯೇ? ಇದು ಕೇವಲ ಸುಸ್ತಲ್ಲ, ಮಧುಮೇಹದ ಆರಂಭಿಕ ಲಕ್ಷಣವಿರಬಹುದು
WhatsApp Group
Join Now