ಭಾರತೀಯರ ರಕ್ಷಣೆಗೆ ಕೇಂದ್ರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

Spread the love

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ವೇಗವಾಗಿ ಹೆಚ್ಚುತ್ತಿರುವ ಸಂಘರ್ಷವು ತೀವ್ರ ಕಳವಳಕಾರಿಯಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಅವರು, ʼಮಧ್ಯಪ್ರಾಚ್ಯದಾದ್ಯಂತ ಪ್ರತಿಯೊಬ್ಬ ಭಾರತೀಯ ನಾಗರಿಕನ ಸುರಕ್ಷತೆ ಮತ್ತು ಭದ್ರತೆ ನಮ್ಮ ಅತ್ಯುನ್ನತ ಆದ್ಯತೆಯಾಗಿರಬೇಕು.

ನಮ್ಮ ಜನರನ್ನ ರಕ್ಷಿಸಲು ಭಾರತ ಸರ್ಕಾರವು ತಕ್ಷಣ ಮತ್ತು ಪೂರ್ವಭಾವಿ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆʼ ಎಂದು ತಿಳಿಸಿದ್ದಾರೆ.

WhatsApp Group Join Now

ತೀವ್ರ ಸ್ವರೂಪ ಪಡೆಯುತ್ತಿರುವ ಸಂಘರ್ಷ!

ಪರಮಾಣು ಒಪ್ಪಂದ ಮಾತುಕತೆಗೆ ಸ್ಪಂದಿಸಿದ ಕಾರಣ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿವೆ. ಇರಾನ್ ಕೂಡ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಈಗ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷವು ಇರಾನ್‌ನ ಗಡಿಗಳನ್ನೂ ಮೀರಿ ವೇಗವಾಗಿ ಹರಡಿದೆ. ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಇಸ್ರೇಲ್ ಅನ್ನ ಗುರಿಯಾಗಿಸಿಕೊಂಡು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನ ಉಡಾಯಿಸಿದೆ.

ಈ ದಾಳಿ ತಡೆಯಲು ಮಿಲಿಟರಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರಿಂದ ಇಸ್ರೇಲ್‌ನಲ್ಲಿ ರಾಷ್ಟ್ರವ್ಯಾಪಿ ಎಚ್ಚರಿಕೆ ನೀಡಲಾಗಿದೆ. ಬಹ್ರೇನ್‌ ಅಮೆರಿಕ ನೌಕಾಪಡೆಯು ಕ್ಷಿಪಣಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುವೈತ್‌ನಲ್ಲಿ ಸೈರನ್‌ಗಳು ಮತ್ತು ಭೀಕರ ಸ್ಫೋಟಗಳು ಕೇಳಿಬಂದಿವೆ. ಅದೇ ರೀತಿ ಕತಾರ್‌ನಲ್ಲಿಯೂ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ವರದಿಯಾಗಿದೆ. ಇರಾಕ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಮ್ಮ ವಾಯುಪ್ರದೇಶಗಳನ್ನ ಮುಚ್ಚಿವೆ. ಜೋರ್ಡಾನ್‌ನಲ್ಲಿ ಎಚ್ಚರಿಕೆ ಸೈರನ್‌ಗಳು ಮೊಳಗಿವೆ.

ಏತನ್ಮಧ್ಯೆ ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿಗಳು ಕೆಂಪು ಸಮುದ್ರದ ಹಡಗು ಮಾರ್ಗಗಳ ಮೇಲೆ ಮತ್ತು ಇಸ್ರೇಲ್ ಮೇಲೆ ದಾಳಿಗಳನ್ನ ಪುನರಾರಂಭಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆಂದು ಇಬ್ಬರು ಹಿರಿಯ ಹೌತಿ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಇರಾನ್‌ನ ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯ ನಿವಾಸದ ಅರಮನೆ ಮತ್ತು ಕಚೇರಿಗಳ ಬಳಿ ಕ್ಷಿಪಣಿ ದಾಳಿ ನಡೆದಿದೆ. ಹೀಗಾಗಿ ಖಮೇನಿಯನ್ನ ಸುರಕ್ಷಿತ ಪ್ರದೇಶದಲ್ಲಿ ಇರಿಸಲಾಗಿದೆ. ಪರಮಾಣು ಒಪ್ಪಂದಕ್ಕೆ ಒಪ್ಪದ ಇರಾನ್‌ ಮೇಲೆ ಇಸ್ರೇಲ್‌ ಜೊತೆ ಸೇರಿ ಜಂಟಿ ದಾಳಿ ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಟೆಹ್ರಾನ್‌ನಿಂದ ಪ್ರತಿದಾಳಿಗಳು ಮತ್ತು ಇರಾನ್ ಕ್ಷಿಪಣಿಗಳ ಪ್ರತಿದಾಳಿಗಳ ನಂತರ ಇಸ್ರೇಲ್‌ನಲ್ಲಿ ರಾಷ್ಟ್ರವ್ಯಾಪಿ ಎಚ್ಚರಿಕೆ ಜಾರಿಯಲ್ಲಿದೆ. ಉದ್ವಿಗ್ನತೆಯ ನಂತರ ಇರಾನ್, ಇಸ್ರೇಲ್ ಮತ್ತು ಇರಾಕ್ ದೇಶಗಳು ತಮ್ಮ ವಾಯುಪ್ರದೇಶಗಳನ್ನ ಸ್ಥಗಿತಗೊಳಿಸಿವೆ. ಹಲವಾರು ವಿಮಾನಯಾನ ಸಂಸ್ಥೆಗಳು ಈ ದೇಶಗಳಿಗೆ ವಿಮಾನಗಳನ್ನ ರದ್ದುಗೊಳಿಸಿವೆ. ಇದಲ್ಲದೆ ಟೆಹ್ರಾನ್‌ನ ಕೆಲವು ಭಾಗಗಳಲ್ಲಿ ಮೊಬೈಲ್ ಫೋನ್ ಲೈನ್‌ಗಳನ್ನ ಕಡಿತಗೊಳಿಸಲಾಗಿದೆ ಮತ್ತು ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.


Spread the love

Leave a Reply