ತೆಲಂಗಾಣದ ಬೌರಂಪೇಟ್ನಲ್ಲಿ ಎರಡು ತಿಂಗಳ ಗಂಡು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಸಂಬಂಧ ಮಗುವಿನ ವಲಸೆ ಕಾರ್ಮಿಕರಾದ ಪೋಷಕರನ್ನು ಬಂಧಿಸಲಾಗಿದೆ. ಮಗುವಿನ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಕಟ್ಟಿ ಬೆಂಕಿಯ ಕುಂಡದಲ್ಲಿ ಶವವನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದ ಕುತ್ಬುಲ್ಲಾಪುರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಇಲ್ಲಿ ಎರಡು ತಿಂಗಳ ಗಂಡು ಮಗುವನ್ನು ಅದರ ಪೋಷಕರೇ ಕೊಂದಿದ್ದಾರೆ ಎನ್ನಲಾಗಿದೆ. ದುಂಡಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಮಗುವಿನ ತಂದೆ-ತಾಯಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಫೆಬ್ರವರಿ 24ರಂದು ಮಧ್ಯಾಹ್ನ 12 ಗಂಟೆಗೆ ಡಯಲ್ 100ಗೆ ಬಂದ ಕರೆಯಿಂದ ಈ ಘಟನೆ ಬೆಳಕಿಗೆ ಬಂದಿದೆ.
ಬೌರಂಪೇಟ್ನ ಹೊರ ವರ್ತುಲ ರಸ್ತೆಯ ಬಳಿಯಿರುವ ಸ್ಪೀಡ್ ಸನ್ರಲಿ ಅಪಾರ್ಟ್ಮೆಂಟ್ನಲ್ಲಿ ಮಗುವಿನ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಹಗ್ಗದಿಂದ ಕಟ್ಟಿ ಕೊಲೆ ಮಾಡಲಾಗಿದೆ. ಪೊಲೀಸರು ಮಗುವನ್ನು ಸೂರ್ಯ ಎಂದು ಗುರುತಿಸಿದ್ದಾರೆ. ಈತ ವಲಸೆ ಕಾರ್ಮಿಕರಾದ ರಾಜೇಂದ್ರ ಆದಿವಾಸಿ ಮತ್ತು ಮಮತಾ ಅಹಿರ್ವಾರ್ ಅವರ ಮಗ. ಈ ದಂಪತಿ ಕೆಲಸ ಹುಡುಕಿಕೊಂಡು ಮಧ್ಯಪ್ರದೇಶದ ನೌಗಾಂವ್ನಿಂದ ಹೈದರಾಬಾದ್ಗೆ ಬಂದಿದ್ದರು. ರಾಜೇಂದ್ರ ಒಂದು ತಿಂಗಳಿನಿಂದ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಬೆಳಗ್ಗೆ ರಾಜೇಂದ್ರ ಕೆಲಸಕ್ಕೆ ಹೋದಾಗ, ಮಗು ತಾಯಿ ಮಮತಾ ಜೊತೆ ಇತ್ತು. ಬೆಳಗ್ಗೆ 11 ಗಂಟೆಗೆ ವಾಪಸ್ ಬಂದಾಗ, ಪತ್ನಿ ಬೆಂಕಿಯ ಕುಂಡದ ಬಳಿ ನಿಂತಿರುವುದನ್ನು ರಾಜೇಂದ್ರ ನೋಡಿದ್ದಾರೆ. ಅಲ್ಲಿ ಮಗುವನ್ನು ಸುಡಲಾಗುತ್ತಿತ್ತು. ತಕ್ಷಣ ಆಕೆಯನ್ನು ಪಕ್ಕಕ್ಕೆ ತಳ್ಳಿದರೂ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ವಿಚಾರಣೆ ವೇಳೆ, ಮಗು ಹಲವು ದಿನಗಳಿಂದ ನಿರಂತರವಾಗಿ ಅಳುತ್ತಿತ್ತು ಎಂಬುದು ತಿಳಿದುಬಂದಿದೆ. ಇದರಿಂದ ಕೋಪಗೊಂಡ ತಾಯಿ, ಮಗುವಿನ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಕಟ್ಟಿ ಸಾಯಿಸಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮಗು ಸತ್ತ ನಂತರ, ಶವವನ್ನು ಉರಿಯುತ್ತಿರುವ ಒಲೆ ಅಥವಾ ಬೆಂಕಿಯ ಕುಂಡದಲ್ಲಿ ಹಾಕಿದ್ದಾಳೆ ಎನ್ನಲಾಗಿದೆ. ತಾಯಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸದ್ಯ ಇಬ್ಬರೂ ಪೋಷಕರು ಪೊಲೀಸ್ ವಶದಲ್ಲಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲು ತನಿಖೆ ಮುಂದುವರಿದಿದೆ.
ಮಗು ಅಳ್ತಿದೆ ಅಂತಾ ಬಾಯಿಗೆ ಬಟ್ಟೆ ತುರುಕಿ, ಕಾಲುಗಳನ್ನು ಕಟ್ಟಿ ಉರಿವ ಬೆಂಕಿಯಲ್ಲಿ ಜೀವಂತ ಸುಟ್ಟ ತಾಯಿ!
WhatsApp Group
Join Now